ಉಡುಪಿ, ನ.14 (DaijiworldNews/PY): "ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಯುನಿವರ್ಸಿಟಿಯಾಗಿ ಮಾಡುವ ಪ್ರಸ್ತಾಪ ಸರಕಾರದ ಮುಂದೆ ಇದೆ. ಸದ್ಯದಲ್ಲೇ ಸಚಿವ ಸಂಪುಟದಲ್ಲಿ ಚರ್ಚೆಯಲ್ಲಿದೆ. ಅದು ಸದ್ಯದಲ್ಲೇ ಅನುಷ್ಠಾನಕ್ಕೆ ಬರುವ ವಿಶ್ವಾಸ ಇದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಮೀನುಗಾರಿಕೆ ಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ರಾಜ್ಯದ ಆಯ್ದ ಕಡೆ ಮೀನುಗಾರಿಕಾ ಕಾಲೇಜನ್ನು ಆರಂಭ ಮಾಡುವ ಬಗ್ಗೆ ನಿರ್ಧಾರ ಆಗಿದೆ. ಅದಕ್ಕೆ ಪೂರಕ ರೂಪು ರೇಷೆ ಕೂಡ ಸಿದ್ದವಾಗಿದೆ" ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.







ಅವರು ಶುಕ್ರವಾರ ಮೂಡುಕುದ್ರುವಿನಲ್ಲಿ ಪಂಜರ ಮೀನು ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಕರಾವಳಿ ಕಾವಲು ಪಡೆ ಮತ್ತು ಮೀನುಗಾರಿಕಾ ಇಲಾಖೆ ಜಂಟಿಯಾಗಿ ವಿನ್ಯಾಸ ಮಾಡಿದ "ಕಡಲ್ ಆ್ಯಪ್" ಅನ್ನು ಬಿಡುಗಡೆಗೊಳಿಸಿದರು.
ಮೀನುಗಾರಿಕಾ ಕೃಷಿಯಿಂದ ಕರಾವಳಿ ಯುವಕರಿಗೆ ಹೇಗೆ ಸ್ವ-ಉದ್ಯೋಗ ಮಾಡಬಹುದು ಎಂಬುದು ಈ ಕಾರ್ಯಗಾರದ ಮುಖ್ಯ ಉದ್ದೇಶ.
ಸಚಿವರು 'ಕಡಲ್ ಆ್ಯಪ್'ನ ಬಗ್ಗೆ ವಿವರಿಸುತ್ತಾ, "ಮೀನುಗಾರರ, ದೋಣಿಗಳ ಚಲನವಲನಗಳನ್ನು ನಿಗಾ ಇಡುವುದು ಮತ್ತು ಮೀನುಗಾರರಿಗೆ ಸಮಸ್ಯೆ ಅದಲ್ಲಿ ತಕ್ಷಣ ಸ್ಪಂದಿಸಲು ಈ ಆ್ಯಪ್ನಲ್ಲಿ ವಿನ್ಯಾಸ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
"ಕಡಲ ಮೀನುಗಾರಿಕೆಯಲ್ಲಿ ಕರ್ನಾಟಕವು ಭಾರತದಲ್ಲಿ 4ನೇ ಸ್ಥಾನದಲ್ಲಿದೆ. ಮುಂದಿನ ಮೂರು ವರ್ಷದಲ್ಲಿ ಸರ್ಕಾರ ಹಾಗೂ ಇಲಾಖೆಯ ಒಟ್ಟು ಶ್ರಮದಿಂದ ಅಗ್ರ ಸ್ಥಾನವನ್ನು ಏರುವ ಗುರಿಯಿದೆ. ಸಿಂಗಾಪುರದಂತಹ ಪುಟ್ಟ ದೇಶದಲ್ಲಿ ಪ್ರತಿ ವರ್ಷ 40-50 ದಶಲಕ್ಷ ದಷ್ಟು ಅಲಂಕಾರಿಕ ಮೀನಿನ ರಫ್ತಾಗುತ್ತದೆ. ಈ ಹೋಲಿಸಿದರೆ ಭಾರತದಲ್ಲಿ ಇದರ ಶೇಕಡಾ 1ರಷ್ಟು ಭಾಗವು ತಲುಪಿಲ್ಲ" ಎಂದರು.
"ಉತ್ತರ ಕನ್ನಡದ ಕಡಲ ಕಿನಾರೆ ಭೌಗೋಳಿಕ ವ್ಯಾಪ್ತಿ, ನೋಡಿದರೆ ನಾವು ಮೀನುಗಾರಿಕಾ ವ್ಯವಸ್ಥೆಯಲ್ಲಿ ಬಹಳಷ್ಟು ಹಿಂದೆ ಉಳಿದಿದ್ದೇವೆ ಎಂದು ಭಾವಿಸುತ್ತೇನೆ ಎಂದರು. ಹಾಗಾಗಿ ಈ ಉದ್ಯಮಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಉತ್ತರ ಕನ್ನಡಕ್ಕೆ ನೂತನ ಅಕ್ವೇರಿಯಂ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ಜೊತೆಗೆ ಬಹುದೊಡ್ಡ ವ್ಯವಸ್ಥೆ ಕಲ್ಪಿಸುವ ಯೋಜನೆ ನಡೆಯುತ್ತಿದೆ" ಎಂದರು.
"ಮೀನುಗಾರಿಕೆಯ ವ್ಯವಹಾರವನ್ನು ಇನ್ನಷ್ಟು ವಿಸ್ತಾರ ಮಾಡಲು ದಿಲ್ಲಿಯಲ್ಲಿ ಮೀನುಗಾರಿಕೆ ಮತ್ತು ರೈಲ್ವೆ ಇಲಾಖೆಯೊಂದಿಗೆ ಒಪ್ಪಂದ ನಡೆದಿದೆ. ಒಳನಾಡು ಮೀನುಗಾರಿಕಾಯಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ.ಕೊರೊನಾದಿಂದ ಮೀನು ಹಾಗೂ ಕೃಷಿಗೆ ಹೆಚ್ಚು ಪರಿಣಾಮ ಆಗಿಲ್ಲ. ಪಡುಕುದ್ರುವಿನಲ್ಲಿ ಮೀನುಕೃಷಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು. ಇದರಿಂದ ಯುವಕರಿಗೆ ಆರ್ಥಿಕ ನಷ್ಟವಾಗದಂತೆ ಉದ್ಯೋಗಾವಕಾಶ ಕಲ್ಪಿಸುವುದು ಹೇಗೆ, ಎಷ್ಟು ವೆಚ್ಚ? ಈ ಮಾಹಿತಿ ಸಂಗ್ರಹಿಸಿದರೆ, ಡಿಸಿಸಿ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್ ನೊಂದಿಗೆ ಸಾಲ ಸೌಲಭ್ಯ , ಅನಾಹುತ ಆದಾಗ ಇನ್ಸೂರೆನ್ಸ್ ನೀಡುವ ಬಗ್ಗೆ ವಾಟರ್ ಟೆಸ್ಟಿಂಗ್ ಮಾಡುವ ಬಗ್ಗೆ ಗಮನ ಹರಿಸಬಹುದು" ಎಂದರು.
"ಈ ಕಾರ್ಯಾಗಾರದಲ್ಲಿ ಭಾಗವಹಿಸಿದವರು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಆವೇಶ ಕ್ಕೆ ಒಳಗಾಗದೆ ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ಮೀನುಗಾರಿಕಾ ಸಚಿವರು ತಮ್ಮ ಆಶಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಉಪನಿರ್ದೇಶಕ ಗಣೇಶ್ ಕೆ., ಮಂಗಳೂರು ಉಪನಿರ್ದೇಶಕ ಪಾರ್ಶ್ವನಾಥ್, ಮಂಗಳೂರು ಎಫ್ ಆರ್ ಐ ಪ್ರತಿಭಾ ರೋಹಿತ್, ಕಲ್ಯಾಣಪುರ ಗ್ರಾ.ಪಂ. ಪಿಡಿಒ ಯೋಗಿತಾ, ಗ್ರಾ.ಪಂ. ಮಾಜಿ ಸದಸ್ಯ ವಿಶುಕುಮಾರ್, ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಪ್ರೊ. ಮಹೋಹರ ಪೈ ಉಪಸ್ಥಿತರಿದ್ದರು.
ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಚೇತನ್ ಆರ್. ಪ್ರಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಸದಸ್ಯ ವಿಜಯ ಕೊಡವೂರು ಸ್ವಾಗತಿಸಿದರು.