ಮಂಗಳೂರು, ನ. 14 (DaijiworldNews/MB) : ದೀಪಗಳ ಹಬ್ಬವಾದ ದೀಪಾವಳಿಯನ್ನು ಆಚರಿಸಲು ನಗರ ಸಜ್ಜಾಗಿದ್ದು ಗೂಡುದೀಪ, ಮಣ್ಣಿನ ದೀಪ ಹಾಗೂ ಈ ಬಾರಿ ಹಸುವಿನ ಸಗಣಿಯಿಂದ ಮಾಡಿದ ದೀಪಗಳನ್ನು ಕೂಡಾ ತಯಾರಿಸಲಾಗಿದೆ. ನಗರದಲ್ಲಿ ವ್ಯಾಪಾರವು ಬಿರುಸಿನಿಂದ ಸಾಗಿದೆ. ಗ್ರಾಹಕರ ಸಂಖ್ಯೆಯೂ ಕೂಡಾ ಅಧಿಕವಾಗಿದೆ.

ಮಾರುಕಟ್ಟೆಯಲ್ಲಿ ಒಂದು ವಾರದಿಂದ ವ್ಯವಹಾರ ಚುರುಕಾಗಿದೆ. ಆದರೆ ಶುಕ್ರವಾರ ವ್ಯಾಪಾರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲಂಕಾರಿಕ ಅಂಗಡಿಗಳು, ಬಟ್ಟೆ ಅಂಗಡಿಗಳು, ಮಾಲ್ಗಳು ಮತ್ತು ಗೂಡುದೀಪಗಳನ್ನು ಮಾರಾಟ ಮಾಡುವ ಅಂಗಡಿಗಳು ಖರೀದಿದಾರರಿಂದ ತುಂಬಿದ್ದವು. ವಿವಿಧ ವರ್ಣರಂಜಿತ ಗೂಡುದೀಪಗಳು ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದವು. ಸಣ್ಣ ಗೂಡುದೀಪಕ್ಕೆ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಗೋವಿನ ಸಗಣಿಗಳಿಂದ ಮಾಡಿದ ಹಣತೆಗೆ ಈ ವರ್ಷ ಭಾರಿ ಬೇಡಿಕೆಯಿದೆ. ಹಂಪನಕಟ್ಟೆ ಮತ್ತು ರಥಬೀದಿಯಲ್ಲಿ ಗೋವಿನ ಸಗಣಿಯಿಂದ ಮಾಡಿದ ಹಣತೆಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಮಾರಾಟಗಾರರು ಹೇಳುತ್ತಾರೆ.
ಗೋವಿನ ಸಗಣಿಯಿಂದ ಮಾಡಿದ ಹಣತೆಗಳನ್ನು ಸುರತ್ಕಲ್ ಬಳಿಯ ಇಂಚನ ಡೈರಿ ಸರ್ವೀಸಸ್ನಲ್ಲಿ ತಯಾರಿಸಿ ನಗರದ ವಿವಿಧ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತದೆ. ಇಂತಹ ಸಾವಿರಾರು ಹಣತೆಗಳನ್ನು ಪ್ರತಿದಿನ ಮಾರಾಟ ಮಾಡಲಾಗುತ್ತಿದೆ. ಮಣ್ಣಿನ ಮಡಕೆಗಳಿಗೆ ಸಹ ಉತ್ತಮ ಬೇಡಿಕೆಯಿದೆ. ಕಂಪನಿಯ ಮಾಲೀಕ ಹರಿಕೃಷ್ಣ ಅವರ ಪ್ರಕಾರ, ಅಲಂಕರಿಸಿದ ಮತ್ತು ವಿವಿಧ ಬಣ್ಣಗಳಲ್ಲಿ ತಯಾರಿಸಿದ ಹಣತೆಗಳನ್ನು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.
ಇನ್ನು ದೀಪಾವಳಿಯ ಈ ಸಂಭ್ರಮದಲ್ಲಿ ಬಟ್ಟೆ ವ್ಯಾಪಾರ ಕೂಡ ಏರಿಕೆಯಾಗುತ್ತಿದೆ. "ಕಳೆದ ನಾಲ್ಕರಿಂದ ಐದು ತಿಂಗಳುಗಳಿಗೆ ಹೋಲಿಸಿದರೆ, ವ್ಯವಹಾರವು ಸುಧಾರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ವ್ಯಾಪಾರವಿದ್ದರೂ ಜನರು ಇನ್ನೂ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ. ಶುಕ್ರವಾರವೂ ಮಾರಾಟದಲ್ಲಿ ಭಾರಿ ಏರಿಕೆ ಕಂಡಿದೆ" ಎಂದು ನಗರದಲ್ಲಿ ಬಟ್ಟೆ ಅಂಗಡಿಯೊಂದನ್ನು ಹೊಂದಿರುವ ಶೇಖರ್ ಪೂಜಾರಿ ಹೇಳುತ್ತಾರೆ
ಸ್ಮಾರ್ಟ್ ಸಿಟಿ ಕೆಲಸಕ್ಕಾಗಿ ನಗರ ಪ್ರದೇಶದ ಹೆಚ್ಚಿನ ರಸ್ತೆಗಳು ಮುಚ್ಚಿರುವುದರಿಂದ ನಗರದಲ್ಲಿ ಸಂಚಾರದಟ್ಟಣೆ ಹಾಗೂ ಗೊಂದಲಕಾರಿ ವಾತಾವರಣ ಉಂಟಾಗಿದೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ತಮ್ಮ ನೆಚ್ಚಿನ ಅಂಗಡಿಗಳಿಗೆ ಹೋಗಲು ಪರದಾಡುವಂತಾಗಿದೆ.
"ಮಂಗಳೂರಿನಲ್ಲಿ ಸಂಚಾರ ದಟ್ಟಣೆ ಬೆಂಗಳೂರಿನ ಮಟ್ಟವನ್ನು ತಲುಪುತ್ತಿದೆ. ಹಬ್ಬದ ಸಮಯದಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳನ್ನು ಮಾಡುವುದು ಸರಿಯಲ್ಲ. ಜನರು ಪ್ರಯಾಣದ ವೇಳೆ ತೊಂದರೆ ಎದುರಿಸುತ್ತಿದ್ದಾರೆ. ಮಾರುಕಟ್ಟೆಗೆ ಹೇಗೆ ಹೋಗಬೇಕೆಂದು ತಿಳಿದಿಲ್ಲ" ಎಂದು ನಗರದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಇನ್ನು ಈ ಪ್ರದೇಶದಲ್ಲಿ ಕಾಮಗಾರಿ ಮಾಡಿಲ್ಲದಿದ್ದರೆ ಹೆಚ್ಚಿನ ವ್ಯಾಪಾರವಾಗುತ್ತಿತ್ತು ಎಂದು ಹೆಚ್ಚಿನ ವ್ಯಾಪಾರಿಗಳು ಹೇಳುತ್ತಾರೆ.