ಮಂಗಳೂರು, ನ.14 (DaijiworldNews/PY): "ಬಿಜೆಪಿಗರು ವ್ಯಾಪಾರದಲ್ಲಿ ದೊಡ್ಡ ಜಾತ್ಯಾತೀತರು. ವೋಟ್ಗಾಗಿ ಮಾತ್ರ ಹಿಂದೂ ಧರ್ಮ ರಕ್ಷಣೆ ಮಾಡುತ್ತಾರೆ. ಮರಳು, ಗಣಿಗಾರಿಕೆಯಲ್ಲಿ ಬಿಜೆಪಿಯ ಜಾತ್ಯಾತೀತತೆ ಭಿನ್ನ ಧರ್ಮದವರ ಜೊತೆ ಸೇರಿ ವ್ಯವಹಾರ ಮಾಡುತ್ತಾರೆ" ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ಹಿಂದೆಯೇ ಅಕ್ರಮ ಮುರಕಲ್ಲು ಗಣಿಕಾರಿಗೆ ಬಗ್ಗೆ ಹೇಳಿದ್ದೇನೆ. ಶಾಸಕರ ಸಂಬಂಧಿಯೊಬ್ಬರು ಇದ್ದಾರೆ ಎಂದಿದ್ದೆ. ಆದರೆ, ಯಾವ ಶಾಸಕರು ಎಂದು ಹೇಳಿರಲಿಲ್ಲ. ಈ ಬಗ್ಗೆ ಬಂಟ್ವಾಳ ಶಾಸಕರು ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಸಮೇತ ಸಾಬೀತು ಪಡಿಸುವಂತೆ ಸವಾಲು ಹಾಕಿದ್ದರು. ಸುದ್ದಿಗೋಷ್ಠಿ ನಡೆಸಿ ಅವರೇ ಅದನ್ನು ವಹಿಸಿಕೊಂಡಂತಾಗಿದೆ. ಇದೀಗ ದಾಖಲೆ ಸಮೇತ ಸಾಬೀತು ಪಡಿಸುತ್ತಿದ್ದೇನೆ" ಎಂದರು
ಅಕ್ರಮ ಗಣಿಕಾರಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ತೆಂಕ ಎಡಪದವಿನ ಪರ್ಮಿಟ್ ಪಡೆದು ಅಕ್ರಮ ನಡೆಸಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಪತ್ನಿ ಉಷಾ ನಾಯ್ಕ್ ಹೆಸರಿನಲ್ಲಿ ಪರ್ಮಿಟ್ ಪಡೆಯಲಾಗಿದೆ. ಮುಡಿಪುವಿನಿಂದ ರೆಡ್ ಬಾಕ್ಸೈಟ್ ಸಾಗಿಸಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಡಿಪುವಿನಲ್ಲಿ ಕೇವಲ ಭೂಮಿ ಸಮತಟ್ಟು ಮಾಡಲಷ್ಟೇ ಅನುಮತಿ ಇದೆ. ಆದರೆ, ಕೈರಂಗಳ ಪಿಡಿಓ ಹೆಸರಿನಲ್ಲಿ ಅಕ್ರಮವಾಗಿ ಅನುಮತಿ ಪಡೆಯಲಾಗಿದೆ" ಎಂದು ಆರೋಪಿಸಿದರು.
"ಮುಡಿಪುವಿನಿಂದ ಸಿಮೆಂಟ್ ಕಂಪೆನಿಗಳಿಗೆ ರೆಡ್ ಬಾಕ್ಸೈಟ್ ಸಾಗಾಟ ಮಾಡಲಾಗುತ್ತಿದ್ದು, ಇದನ್ನು ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಗೆ ಸಾಗಿಸಲಾಗಿದೆ. ಪ್ರಖ್ಯಾತ ಸಿಮೆಂಟ್ ಕಂಪೆನಿಗಳಿಗೆ ಈ ರೆಡ್ ಬಾಕ್ಸೈಟ್ ಅನ್ನು ಸಾಗಾಟ ಮಾಡಲಾಗುತ್ತಿದೆ. ಪಿಡಿಓ ಹೆಸರಿನಲ್ಲಿ 14 ಸಾವಿರ ಟನ್ ರೆಡ್ ಬಾಕ್ಸೈಟ್ ಸಾಗಿಸಲಾಗಿದೆ" ಎಂದರು.
"ನಾನು ಮಾಡಿದ ಆರೋಪವನ್ನು ಸಾಬೀತು ಮಾಡಲು ಬಂಟ್ವಾಳ ಶಾಸಕರು ಸವಾಲು ಹಾಕಿದ್ದರು. ಆರೋಪ ಸಾಬೀತು ಪಡಿಸದಿದ್ದಲ್ಲಿ ರಾಜೀನಾಮೆ ಕೊಡುವುದಾಗಿ ಹೇಳಿದ್ದರು" ಎಂದು ತಿಳಿಸಿದರು.
"ಬಿಜೆಪಿಗರು ವ್ಯಾಪಾರದಲ್ಲಿ ದೊಡ್ಡ ಜಾತ್ಯಾತೀತರು. ವೋಟ್ಗಾಗಿ ಮಾತ್ರ ಹಿಂದೂ ಧರ್ಮ, ಧರ್ಮ ರಕ್ಷಣೆ ಮಾಡುತ್ತಾರೆ. ಮರಳು, ಗಣಿಗಾರಿಕೆಯಲ್ಲಿ ಬಿಜೆಪಿಯ ಜಾತ್ಯಾತೀತತೆ ಭಿನ್ನ ಧರ್ಮದವರ ಜೊತೆ ಸೇರಿ ವ್ಯವಹಾರ ಮಾಡುತ್ತಾರೆ" ಎಂದರು.
"ಗಣಿಕಾರಿಕೆಯ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಬಂಟ್ವಾಳ ಶಾಸಕರು ತಾನೊಬ್ಬ ರೈತ ಅನ್ನೋ ರೀತಿ ಪೋಸ್ ಕೊಡುತ್ತಾರೆ. ಆದರೆ, ಅವರು ರೈತರಾ? ಅಥವಾ ವ್ಯಾಪಾರಿಯಾ? ಸಾಬೀತಾಗಲಿ" ಎಂದರು.