ಬೆಂಗಳೂರು,ಜೂ 04 : ಸಚಿವ ಸ್ಥಾನದ ಆಕಾಂಕ್ಷಿಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಕಗ್ಗಂಟಾಗಿ ಪರಿಣಮಿಸಿರುವ ಖಾತೆ ಹಂಚಿಕೆಯು ಹೈಕಮಾಂಡ್ ಸಮ್ಮುಖದಲ್ಲೇ ಬಗೆಹರಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣ ಗೊಂಡಿದೆ. ಇನ್ನೊಂದೆಡೆ ಈಗಾಗಲೇ ಆಕಾಂಕ್ಷಿಗಳ ಅಸಮಾಧಾನ ಸ್ಪೋಟಗೊಂಡಂತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಆದ್ರೆ ಮೇ 25 ರದು ಈ ಮೇಲ್ ಮೂಲಕ ಎಸ್.ಆರ್ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದರೂ ಇದುವರೆಗೆ ಯಾಕೆ ಈ ವಿಚಾರ ಬಹಿರಂಗವಾಗಿಲ್ಲ ಮತ್ತು ಅವರ ರಾಜೀನಾಮೆ ಯಾಕೆ ಅಂಗೀಕಾರವಾಗಿಲ್ಲ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ಕಾರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇನ್ನೊಂದೆಡೆ ರಾಜ್ಯ ಸಚಿವ ಸಂಪುಟಕ್ಕೆ ಮಹೂರ್ತ ನಿಗದಿಯಾಗಿರುವುದರಿಂದ, ಹಾಗೂ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶದಿಂದ ವಾಪಸಾಗಲು ಕಾಯುತ್ತಿದ್ದ ರಾಜ್ಯ ನಾಯಕತ್ವವು ಕಾಂಗ್ರೆಸ್ ಪಟ್ಟಿ ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ದಿಲ್ಲಿಗೆ ತೆರಳುವ ಸಾಧ್ಯತೆಯಿದೆ.
ಇದರ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಗಳು ರಾಜ್ಯ ನಾಯಕರ ಬಳಿ ತಮ್ಮ ಲಾಬಿ ಮುಂದುವರೆಸಿದ್ದಾರೆ. ಆದರೆ ಭಾನುವಾರ ಬೆಳಗ್ಗೆಯೇ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಭೇಟಿ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರು ಗಂಟಲು ನೋವಿನಿಂದ ಯಾರ ಭೇಟಿಗೂ ಒಪ್ಪಲಿಲ್ಲ ಎಂದು ತಿಳಿದುಬಂದಿದೆ.