ಮಂಗಳೂರು,ನ. 15 (DaijiworldNews/MB) : ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಆಯೋಗದ (ಯುಜಿಸಿ) ಮಾರ್ಗಸೂಚಿಗಳ ಪ್ರಕಾರ ಮಂಗಳೂರು ವಿಶ್ವವಿದ್ಯಾಲಯವು ಅಂತಿಮ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳನ್ನು ನವೆಂಬರ್ 17 ರಿಂದ ಪುನರಾರಂಭಿಸುವುದಾಗಿ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ, ಪೋಷಕರಲ್ಲಿ ಇನ್ನೂ ಆತಂಕವಿದೆ. ಈ ಹಿನ್ನೆಲೆಯಲ್ಲಿ, ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪ್ರಮಾಣಪತ್ರವನ್ನು ತರಬೇಕಾಗುತ್ತದೆ. ಈ ಪತ್ರದ ಪ್ರತಿಯು ವಿಶ್ವವಿದ್ಯಾಲಯದ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ವೈಯಕ್ತಿಕವಾಗಿ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಬಹುದು.
ತರಗತಿಗಳಿಗೆ ಹಾಜರಾಗುವ ಮೂರು ದಿನಗಳ ಮುನ್ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕು. ಹಾಗೆಯೇ ಕೊರೊನಾ ವರದಿ ನೆಗೆಟಿವ್ ಆದರೆ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ನೀರು ಮತ್ತು ಆಹಾರವನ್ನು ತಮ್ಮ ಮನೆಯಿಂದಲ್ಲೇ ತರಬೇಕು. ಮಾಸ್ಕ್ನ್ನು ಕಡ್ಡಾಯವಾಗಿ ಎಲ್ಲಾ ಸಮಯದಲ್ಲೂ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಗತ್ಯವಿದ್ದರೆ, ಪಾಳಿಯಲ್ಲಿ ಬೋಧನೆ, ಪ್ರಯೋಗಾಲಯದಲ್ಲಿ ತರಗತಿ ಮತ್ತು ಯೋಜನಾ ತರಗತಿಗಳನ್ನು ನಡೆಸಬಹುದಾಗಿದೆ. ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೆಯೇ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳು ಇರುವವರಿಗೆ ಕ್ಯಾಂಪಸ್ಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.
ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಮಾತನಾಡಿದ್ದು, ''ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾದ ಎಲ್ಲಾ 210 ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇವಲ 50% ವಿದ್ಯಾರ್ಥಿಗಳಿಗೆ ಮಾತ್ರ ತರಗತಿಯಲ್ಲಿ ಅವಕಾಶ ನೀಡಲಾಗುವುದು'' ಎಂದು ತಿಳಿಸಿದ್ದಾರೆ.
ತರಗತಿಗಳು ಪುನರಾರಂಭಗೊಳ್ಳುವ ಮೊದಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ರಾಜ್ಯ ಆರೋಗ್ಯ ಇಲಾಖೆ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ.