ಮಂಗಳೂರು, ನ. 15 (DaijiworldNews/MB) : ಕೊರೊನಾ ಸೋಂಕಿನ ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಮುಚ್ಚಿರುವ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳನ್ನು ನವೆಂಬರ್ 17ರಿಂದ ಮತ್ತೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅನುಸಾರವಾಗಿ ಮಾರ್ಗಸೂಚಿ ಹೊರಡಿಸಿರುವ ಮಂಗಳೂರು ವಿಶ್ವನಿದ್ಯಾನಿಲಯವು ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸುವುದಾಗಿ ಪ್ರಕಟಿಸಿದೆ. ಹಾಗೆಯೇ ತನ್ನ ಅಂಗಸಂಸ್ಥೆಗಳಾದ ಎಲ್ಲಾ 210 ಕಾಲೇಜುಗಳಿಗೆ ಸೂಚನೆ ನೀಡಿದೆ.

ಆದರೆ ಈ ನಡುವೆ ಕಾಸರಗೋಡು ಮಂಗಳೂರು ನಡುವಿನ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಆದರೂ ಉಭಯ ಜಿಲ್ಲೆಗಳ ನಡುವೆ ಬಸ್ ಸಂಚಾರ ಆರಂಭವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕೊರೊನಾ ಲಾಕ್ಡೌನ್ ಬಳಿಕ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಬಸ್ ಸಂಚಾರ ಮಾತ್ರವಲ್ಲದೇ ಇತರೆ ಎಲ್ಲಾ ರೀತಿಯ ಸಂಚಾರವು ಸ್ಥಗಿತಗೊಂಡಿದ್ದು ಕೆಲವು ಸಮಯದಿಂದ ಉಭಯ ಜಿಲ್ಲೆಗಳಿಗೆ ಕೆಲಸಕ್ಕೆ ಅಥವಾ ವೈದ್ಯಕೀಯ ಕಾರಣದಿಂದಾಗಿ ಆಗಮಿಸುವವರಿಗೆ ಕೆಲವೊಂದು ಮಾನದಂಡದ ಮೇಲೆ ಅವಕಾಶ ನೀಡಲಾಗಿದೆ. ಆದರೆ ಈವರೆಗೂ ಉಭಯ ಜಿಲ್ಲೆಗಳ ನಡುವೆ ಬಸ್ ಸಂಚಾರ ಮಾತ್ರ ಆರಂಭವಾಗಿಲ್ಲ.
ಇನ್ನು ಅಂತಿಮ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ ೧೭ ರಿಂದ ಕಾಲೇಜುಗಳು ಆರಂಭವಾಗಲಿದೆ. ಕಾಸರಗೋಡು ಜಿಲ್ಲೆಯಿಂದ ನಗರಕ್ಕೆ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಬರುತ್ತಾರೆ. ಆದರೆ ಈಗ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಹೇಗೆ ಪ್ರತಿದಿನ ಸಂಚಾರ ನಡೆಸುವುದು ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಇನ್ನು ಸೋಮವಾರ ಉಭಯ ಜಿಲ್ಲೆಗಳ ಕೆಎಸ್ಆರ್ಟಿಸಿ ಬಸ್ಸು ಅಧಿಕಾರಿಗಳ ಮಾತುಕತೆ ನಡೆಯಲಿದೆ. ಸಭೆಯಲ್ಲಿ ಬಸ್ಸು ಸಂಚಾರ ಪುನರಾರಂಭದ ಬಗ್ಗೆ ಚರ್ಚೆ ನಡೆಯಲಿದೆ. ಬಸ್ಸು ಸಂಚಾರ ಪುನರಾರಂಭಿಸುವಂತೆ ಒತ್ತಾಯ ತೀವ್ರಗೊಳ್ಳುತ್ತಿದ್ದು, ಸೋಮವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.