ಉಡುಪಿ, ನ. 15 (DaijiworldNews/MB) : ನವೆಂಬರ್ 15 ರ ಭಾನುವಾರದಂದು ಕೆಳಪರ್ಕಳ ಬಳಿಯ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದ ಭತ್ತದ ಗದ್ದೆಯಲ್ಲಿ ಅನಾಥ ಕಾರು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.







ಕೇರಳ ನೋಂದಣಿ ಸಂಖ್ಯೆ ಕೆಎಲ್ 01 ಎವಿ 4981 ಹೊಂದಿರುವ ಕಾರು ಭತ್ತದ ಗದ್ದೆಯಲ್ಲಿದ್ದು ಕಾರಿಗೆ ಯಾವುದೇ ಹಾನಿಯಾಗಿರುವುದು ಕಂಡು ಬಂದಿಲ್ಲ.
ಸ್ಥಳದಲ್ಲಿಯೇ ನೆರೆದಿದ್ದ ಸ್ಥಳೀಯರು, ಈ ಗದ್ದೆಯ ಮಧ್ಯದಲ್ಲಿ ಕಾರು ಹೇಗೆ ಬಂತು ಎಂದು ಆಶ್ಚರ್ಯಪಟ್ಟಿದ್ದಾರೆ. ಒಂದು ವೇಳೆ ಕಾರು ಏನಾದರೂ ಅಪಘಾತಕ್ಕೀಡಾಗಿದ್ದರೆ, ಕನಿಷ್ಠ ಸಣ್ಣ ಹಾನಿಯ ಲಕ್ಷಣಗಳು ಕಂಡುಬರುತ್ತಿದ್ದವು. ಆದರೆ ಈ ಕಾರಿನಲ್ಲಿ ಮಣ್ಣು ಕೂಡಾ ಇಲ್ಲ ಎಂಬುದು ಸ್ಥಳೀಯರ ವಾದವಾಗಿದೆ.
ಇನ್ನು ಕಾರು ದೊರೆತ ಭತ್ತದ ಗದ್ದೆಯ ಸುತ್ತಲೂ ಎತ್ತರದ ಪೊದೆಗಳು ಮತ್ತು ಸಸ್ಯಗಳಿದ್ದು ಆದರೆ ಈ ಕಾರು ಈ ಪೊದೆಯನ್ನು ದಾಟಿ ಯಾವುದೇ ಹಾನಿ ಸಂಭವಿಸದೆ ಹೇಗೆ ಇಲ್ಲಿಗೆ ಬಂದಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಯಾರದರೂ ಅಪರಾಧ ಚಟುವಟಿಕೆಗಳಿಗೆ ಈ ಕಾರನ್ನು ಬಳಸಿ ಬಳಿಕ ಕಾರನ್ನು ಇಲ್ಲಿ ಬಿಟ್ಟು ಹೋಗಿರಬಹುದು ಎಂಬ ಅನುಮಾನವೂ ಕೂಡಾ ಇತ್ತು.
ಈ ವಿಚಾರವನ್ನು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದು ತನಿಖೆಯ ನಂತರ, ಕಾರು ವಾಸ್ತವವಾಗಿ ವಿದ್ಯಾರ್ಥಿಯೊಬ್ಬನಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯು ಕಾರನ್ನು ರಿವರ್ಸ್ ತೆಗೆದುಕೊಳ್ಳುವ ಸಂದರ್ಭ ಕಾರು ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ನುಗ್ಗಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಗಲು ತಡವಾದ ಹಿನ್ನೆಲೆ ಸ್ಥಳದಲ್ಲಿಯೇ ಕಾರನ್ನು ಇರಿಸಿ ಒಂದೆರಡು ದಿನದಲ್ಲಿ ವಾಪಾಸ್ ತೆಗೆದುಕೊಂಡು ಹೋಗಬಹುದು ಎಂದು ನಿರ್ಧರಿಸಿದ್ದನು ಎಂದು ಹೇಳಲಾಗಿದೆ.
ವಿದ್ಯಾರ್ಥಿಯು ಈಗಾಗಲೇ ಕಾರನ್ನು ಪಡೆಯಲು ಪೊಲೀಸರನ್ನು ಸಂಪರ್ಕಿಸಿದ್ದು ಪರಿಶೀಲನೆಗಾಗಿ ತನ್ನ ದಾಖಲೆಗಳನ್ನು ನೀಡಿದ್ದಾನೆ ಎಂದು ತಿಳಿದುಬಂದಿದೆ.