ಮಂಗಳೂರು, ನ.15 (DaijiworldNews/HR): ಸಹಕಾರಿ ಬ್ಯಾಂಕುಗಳಲ್ಲಿ ತಮ್ಮ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡಿರುವ ಠೇವಣಿದಾರರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ದಾಖಲೆಗಳಿಲ್ಲದೆ ಸಾಲ ನೀಡುವ ಬ್ಯಾಂಕುಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಗೌಡ ಹೇಳಿದ್ದಾರೆ.



















ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ 67 ನೇ ಅಖಿಲ ಭಾರತ ಸಹಕಾರಿ ವಾರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, "ಕರ್ನಾಟಕದ ಎಲ್ಲಾ 280 ಸಹಕಾರಿ ಬ್ಯಾಂಕುಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾಲ ನೀಡುವಲ್ಲಿ ಅಗ್ರ ಸ್ಥಾನವನ್ನು ಪಡೆದಿವೆ. ಒಂದು ಸಹಕಾರಿ ಬ್ಯಾಂಕಿನಲ್ಲಿ ನಡೆದಿರುವ ವಂಚನೆ ಎಲ್ಲಾ ಬ್ಯಾಂಕುಗಲ್ಲಿಯೂ ನಡೆಯುತ್ತದೆ ಎಂದು ಅರ್ಥವಲ್ಲ ಆದಾಗಿಯೂ ಠೇವಣಿದಾರರಿಗೆ ಮೋಸ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಆತ್ಮನಿರ್ಭರ ಯೋಜನೆಯಡಿ ರಾಜ್ಯಕ್ಕೆ ಮೀಸಲಿಟ್ಟಿರುವ ಹಣದಿಂದ ಸಹಕಾರಿ ವಲಯಕ್ಕೆ 600 ಕೋಟಿ ರೂ. ನೀಡುವ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಇಂತಹ ಪ್ರಸ್ತಾಪವನ್ನು ಕೇಂದ್ರ ಸರ್ಕಾರದೊಂದಿಗೆ ಇರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಹಣಕಾಸಿನ ಪ್ರತಿಕ್ರಿಯೆಯಡಿಯಲ್ಲಿ ಸಾಲ ನೀಡುವ ಕಾರ್ಯಕ್ರಮವು ಮೈಸೂರು, ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿಯ ನಾಲ್ಕು ಸಹಕಾರಿ ವಲಯಗಳಲ್ಲಿ ಪ್ರಾರಂಭವಾಗಿದೆ. ಈ ಬ್ಯಾಂಕುಗಳಿಂದ ಪಡೆದ ಸಾಲದ ನೈಜ ಬಳಕೆಯನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ" ಎಂದು ಹೇಳಿದ್ದಾರೆ.
ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, "ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಕಾರಿ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ಈ ವರ್ಷದಿಂದಲೇ ಪ್ರಾರಂಭವಾಗಲಿದೆ. ಸಹಕಾರಿ ವಾರವು ಸಹಕಾರಿಗಳಿಗೆ ಹಬ್ಬವಾಗಿದೆ. ಈ ವಾರ ಆಚರಿಸುವ ಮುಖ್ಯ ಉದ್ದೇಶ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಉತ್ತಮಗೊಳಿಸಬೇಕೆಂಬುವುದಾಗಿದೆ. ಕಳೆದ 25 ವರ್ಷಗಳಲ್ಲಿ 100% ಕೃಷಿ ಸಾಲವನ್ನು ಮರುಪಾವತಿಸಿದ ಮೊದಲ ಸಹಕಾರಿ ಬ್ಯಾಂಕ್ ಎಸ್ಸಿಡಿಸಿಸಿ ಬ್ಯಾಂಕ್ ಆಗಿದೆ. ಇದು ಅನೇಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸ್ಪರ್ಧೆಯನ್ನು ನೀಡಿದೆ " ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷ ಪತ್ರಿಕೆ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಇದಲ್ಲದೆ, ಉತ್ತಮ ನವೋದಯ ಸ್ವ-ಸಹಾಯ ಸಂಘಗಳನ್ನು ಸನ್ಮಾನಿಸಲಾಯಿತು. ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮದ ಮೊದಲು ನಡೆದ ಸಹಕಾರಿ ಜಾಥದ ಧ್ವಜವನ್ನು ಹಾರಿಸಿದ್ದು, ಮೇಯರ್ ದಿವಾಕರ್ ಪಾಂಡೇಶ್ವರ ಅವರು ಸಹಕಾರಿ ಸಂಘಗಳ ಸಂಕೀರ್ಣವನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ಧ್ವಜಾರೋಹಣ ಮಾಡಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಮತ್ತು ಮೀನುಗಾರಿಕೆ ಒಕ್ಕೂಟದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಎಸ್ಕೆಎಡಿಎಸ್ ಅಧ್ಯಕ್ಷ ರವೀಂದ್ರ ಕಾಂಬಾಲಿ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಎಸ್. ಸಲೀಮ್, ಎಸ್ಸಿಡಿಸಿಸಿ ಬ್ಯಾಂಕ್ ಸಿಇಒ ರವೀಂದ್ರ ಬಿ, ಉಡುಪಿ ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷ ಬಿ ಜಯಕಾರ ಶೆಟ್ಟಿ ಇಂದ್ರಾಲಿ, ಉಪಸ್ಥಿತರಿದ್ದರು.
ಜನಔಷದಿ ಕೇಂದ್ರಗಳಿಗೆ ಸಹಕಾರಿ ವಲಯ ಮತ್ತು ಸಮಾಜದ ಐದು ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಅನುಮತಿ ಪತ್ರವನ್ನು ಹಸ್ತಾಂತರಿಸಲಾಯಿತು.
ಬಡವರ ಬಂಧು ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು, ಉತ್ತಮ ಸಹಕಾರಿ ಸಂಘಗಳು ಮತ್ತು ಅತ್ಯುತ್ತಮ ಸಹಕಾರಿ ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಉತ್ತಮ ನವೋದಯ ಸ್ವ-ಸಹಾಯ ಸಂಘಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಸಹಕಾರಿ ವಿಭಾಗದ ನಿವೃತ್ತ ಹೆಚ್ಚುವರಿ ರಿಜಿಸ್ಟ್ರಾರ್ ಶಶಿಧರ ಅವರು ವೇದಿಕೆಯ ಕಾರ್ಯಕ್ರಮದ ಪ್ರಾರಂಭದ ಮೊದಲು ಪ್ರಾಸ್ತಾವಿಕ ಭಾಷಣ ಮಾಡಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು.