ಮಂಗಳೂರು, ಜೂ.4: ರಾಜ್ಯದಲ್ಲಿ ಹಳಸಿದವರ ಪಕ್ಷ ಕಾಂಗ್ರೆಸ್ ಮತ್ತು ಹಸಿದವರ ಪಕ್ಷ ಜೆಡಿಎಸ್ ಜೊತೆ ಸೇರಿ ಅಪವಿತ್ರ ಮೈತ್ರಿ ಮಾಡಿ ಸರಕಾರ ರಚಿಸಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಜೂ 4 ರಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಬೀದರ್ನಲ್ಲಿ ಬಿಜೆಪಿಗೆ ಅಂದುಕೊಂಡಷ್ಟು ಸೀಟುಗಳು ಸಿಗದೆ
ಸರಳ ಬಹುಮತ ಗಳಿಸುವಲ್ಲಿ ಪಕ್ಷ ವಿಫಲವಾಯಿತು. ಆದರೆ ಅಧಿಕಾರಕ್ಕಾಗಿ ಹಸಿದ ಜೆಡಿಎಸ್ ಹಾಗೂ ನಿರೀಕ್ಷಿತ ಸ್ಥಾನಗಳು ಸಿಗದೆ ಹಳಸಿದ ಹೋದ ಕಾಂಗ್ರೆಸ್ ಕೈಜೋಡಿಸಿ ಸರಕಾರ ರಚಿಸಿದೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಕರಾವಳಿಯಲ್ಲಿ ಬಿಜೆಪಿ ಪಾಲಿಗೆ 7 ಸ್ಥಾನಗಳನ್ನು ಜಯಿಸಿ ಕೊಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದರು.
ದೇಶದೆಲ್ಲೆಡೆ ಮೋದಿ ಅಲೆ ವಿಜೃಂಭಿಸುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವ ಸೂಚನೆ ಕಾಣುತ್ತಿದ್ದಂತೆ ಸೋಲುವ ಭಯದಲ್ಲಿ ತೃತೀಯರಂಗಗಳೆಲ್ಲವೂ ಒಂದಾಗುತ್ತಿದೆ. ಮೋದಿ ಜಯಶಾಲಿಯಾದರೆ ಭಾರತ ಮತ್ತಷ್ಟು ಬಲಿಷ್ಟವಾಗುತ್ತಿದೆ. ಹೀಗಾಗಿ ಪಾಕಿಸ್ತಾನ , ಚೀನಾ ಹಾಗೂ ಕಾಂಗ್ರೆಸ್ ಪಕ್ಷ , ಮೋದಿ ಅವರನ್ನು ಸೋಲಿಸಲು ಹವಣಿಸುತ್ತಿದೆ ಎಂದರು. ಇದಕ್ಕಾಗಿ 2019 ರಲ್ಲಿ ಮೋದಿ ಗೆಲ್ಲದಂತೆ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಉಡುಪಿಯಲ್ಲಿ ಜಾನುವಾರು ಸಾಗಾಟಗಾರನ ಹಸನಬ್ಬ ಸಾವಿನ ಕೇಸ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಪಕ್ಷ ಯಾರ ಹತ್ಯೆಗೂ ಬೆಂಬಲಿಸುವುದಿಲ್ಲ. ಅದೇ ರೀತಿ ಕಾನೂನು ಬಾಹಿರ ಚಟುವಟಿಕೆಗಳಿಗೆ ನಾವು ಬೆಂಬಲಿಸಲ್ಲ, ಘಟನೆ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದು ಯಾರೇ ಆರೋಪಿಗಳಿದ್ದರೂ ಶಿಕ್ಷೆಯಾಗಲಿ ಎಂದರು.