ಉಡುಪಿ, ನ. 15 (DaijiworldNews/SM): ಮನೆಯ ಬೀಗ ಮುರಿದು ಕಳ್ಳತನ ಪ್ರಕರಣ ಕುಂದಾಪುರದ ಬೀಜಾಡಿಯ ಬೀಪಾನ್ಬೆಟ್ಟು ಎಂಬಲ್ಲಿ ನಡೆದಿದ್ದು, ಪ್ರಕರಣ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂದ್ರಾಳಿಯ ರಾಜೇಶ ನಾಯ್ಕ(42) ಹಾಗೂ ಆತನ ಪತ್ನಿ ಪದ್ಮ ಪಾಮಡಿ(37) ಬಂಧಿತ ಆರೋಪಿಗಳಾಗಿದ್ದಾರೆ. ಕುಂದಾಪುರದ ಜಯರಾಜ್ ಶೆಟ್ಟಿ ಎಂಬವರ ಮನೆಯಿಂದ ಆರೋಪಿಗಳು ಕಳವು ಕೃತ್ಯ ನಡೆಸಿದ್ದಾರೆ. 9,88,500 ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣಗಳನ್ನು ದರೋಡೆಗೈದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ನಡೆಸಲಾಗಿತ್ತು. ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆರೋಪಿ ರಾಜೇಶ್ ಈ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ. ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ. ಅದಾದ ಬಳಿಕ ಮತ್ತೆ ಕಳ್ಳತನಕ್ಕೆ ಮುಂದಾಗಿದ್ದು, ಭಾರೀ ಮೌಲ್ಯ ಚಿನ್ನಾಭರಣ ಕಳವುಗೈದು ಪತಿ-ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.