ಮಂಜೇಶ್ವರ, ನ. 16 (DaijiworldNews/MB) : ಗದಗ ಮೂಲದ ಹೋಟೆಲ್ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಹಾಗೂ ಪ್ರಿಯಕರನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಭಾಗ್ಯ ಶ್ರೀ ( 32) ಮತ್ತು ಕರ್ನಾಟಕ ರಾಮಪುರದ ಅಲ್ಲಾ ಪಾಷಾ ( 23) ಎಂದು ಗುರುತಿಸಲಾಗಿದೆ.
ಮಂಗಳೂರಿನ ಕೊಡಿಯಾಲ್ಬೈಲ್ನ ಹೋಟೆಲ್ವೊಂದರ ಕಾರ್ಮಿಕನಾಗಿದ್ದ ಗದಗದ ಹನುಮಂತ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ನವಂಬರ್ ಐದರಂದು ಬೆಳಿಗ್ಗೆ ಕುಂಜತ್ತೂರು ಪದವಿನ ರಸ್ತೆಯಲ್ಲಿ ಹನುಮಂತನ ಮೃತದೇಹ ಪತ್ತೆಯಾಗಿತ್ತು. ಸಮೀಪ ಸ್ಕೂಟರ್ ಪತ್ತೆಯಾಗಿತ್ತು. ಇದರಿಂದ ಆರಂಭದಲ್ಲಿ ಅಪಘಾತ ಎಂದು ಸಂಶಯ ಉಂಟಾಗಿತ್ತು. ಆದರೆ ಪೊಲೀಸರಿಗೆ ಉಂಟಾದ ಅನುಮಾನ ಹಾಗೂ ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆ ಎಂದು ಸಾಬೀತಾಗಿತ್ತು.
ನವಂಬರ್ ಐದರಂದು ಮುಂಜಾನೆ ಎರಡು ಗಂಟೆಗೆ ಹನುಮಂತ ಮಂಗಳೂರಿನ ಹೋಟೆಲ್ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಜೊತೆ ಅಲ್ಲಾ ಪಾಷಾ ಇರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ವಾಗ್ವಾದ ನಡೆದು ಹೊಡೆದಾಟಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಹನುಮಂತನನ್ನು ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಅಲ್ಲಾ ಪಾಷಾ ತನ್ನ ಬೈಕ್ನಲ್ಲಿ ಮೃತದೇಹವನ್ನು ಕಟ್ಟಿಕೊಂಡೊಯ್ದಿದ್ದು, ಭಾಗ್ಯಶ್ರೀ ಸ್ಕೂಟರ್ನಲ್ಲಿ ಹಿಂಬಾಲಿಸಿದ್ದಾಳೆ. ಮೃತದೇಹವನ್ನು ಕುಂಜತ್ತೂರು ಪದವಿನಲ್ಲಿ ರಸ್ತೆಯಲ್ಲಿ ಎಸೆದು ಸ್ಕೂಟರ್ ಮಗುಚಿ ಹಾಕಿ ಅಲ್ಲಿಂದ ಬೈಕ್ನಲ್ಲಿ ಮನೆಗೆ ಮರಳಿದ್ದಾರೆ. ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು.
ಬೆಳಿಗ್ಗೆ ಪರಿಸರವಾಸಿಗಳು ಘಟನೆಯನ್ನು ಕಂಡು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತ ಎಂದು ನಂಬಿದ್ದರು. ಆದರೆ ಪರಿಸರವಾಸಿಗಳು ಸಂಶಯ ವ್ಯಕ್ತಪಡಿಸಿದ್ದರಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಸಾಬೀತಾಗಿತ್ತು. ಅಲ್ಲಾ ಪಾಷಾ ಆಗಾಗ ಮನೆಗೆ ಬರುತ್ತಿರುವ ಬಗ್ಗೆ ಹನುಮಂತ ಮತ್ತು ಪತ್ನಿ ನಡುವೆ ಆಗಾಗ ಜಗಳಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.
ಕೊಲೆ ನಡೆಯುವ ಒಂದು ವಾರಗಳ ಹಿಂದೆ ಹನುಮಂತ ಹಾಗೂ ಪತ್ನಿಯ ನಡುವೆ ವಾಗ್ವಾದ ನಡೆದಿರುವುದನ್ನು ಪರಿಸರವಾಸಿಗಳು ಗಮನಿಸಿದ್ದರು. ಈ ಎಲ್ಲಾ ಮಾಹಿತಿ ಆಧಾರದಲ್ಲಿ ಹನುಮಂತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹನುಮಂತನ ಕುಟುಂಬ ಹಲವು ವರ್ಷಗಳಿಂದ ತಲಪಾಡಿಯ ದೇವಿಪುರದಲ್ಲಿ ವಾಸವಾಗಿದ್ದು, ವಿಕಲಚೇತನರಾಗಿದ್ದ ಹನುಮಂತ ಕೊಡಿಯಾಲ್ಬೈಲ್ನ ಹೋಟೆಲ್ವೊಂದರಲ್ಲಿ ದುಡಿಯುತ್ತಿದ್ದನು. ಅಲ್ಲಾ ಪಾಷಾ ಜೆಸಿಬಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು.
ಮಂಜೇಶ್ವರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಕೆ. ಪಿ ಶೈನು, ಸಬ್ ಇನ್ಸ್ಪೆಕ್ಟರ್ ರಾಘವನ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ಸಿಬ್ಬಂದಿಗಳಾದ ಥೋಮಸ್, ಮನು, ಸಂತೋಷ್, ಪ್ರವೀಣ್, ಉದೇಶ್, ಬಾಲಕೃಷ್ಣ, ನಾರಾಯಣ, ರಾಜೇಶ್, ಆಸ್ಟಿನ್ ತಂಬಿ, ಸಜೀಶ್, ಲಕ್ಷ್ಮಿ ನಾರಾಯಣ ತಂಡದಲ್ಲಿದ್ದರು.