ಮಂಗಳೂರು, ನ. 16 (DaijiworldNews/MB) : ಉದ್ಯಮಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ ಮಾಡಿದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ ರವಿವಾರ ರಾತ್ರಿ ಸುಮಾರು 10:30 ಗಂಟೆಗೆ ನಡೆದಿದೆ.



ಕಂದಾವರದ ಕೈಕಂಬ ನಿವಾಸಿ ಅಬ್ದುಲ್ ಅಝೀಝ್ (56) ದಾಳಿಗೊಳಗಾದ ಉದ್ಯಮಿ. ಮಂಗಳೂರಿನಲ್ಲಿ ವೆನ್ಝ್ ಬಟ್ಟೆಬರೆ ಅಂಗಡಿ ಹೊಂದಿರುವ ಅಝೀಝ್ ಕಂದಾವರ ಮಸೀದಿಯ ಆಡಳಿತ ಕಮಿಟಿಯಲ್ಲೂ ಸಕ್ರಿಯರಾಗಿದ್ದರು.
ರಾತ್ರಿ ಸುಮಾರು 10:30 ಗಂಟೆಗೆ ಅಝೀಝ್ ಮಸೀದಿಯಲ್ಲಿ ನಮಾಝ್ ಮಾಡಿ ತಮ್ಮ ನಿವಾಸಕ್ಕೆ ವಾಪಾಸ್ ಆಗಲು ತನ್ನ ಕಾರು ಇರಿಸಿದ್ದ ಜಾಗಕ್ಕೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವಕರು ಅಝೀಝ್ ಅವರ ತಲೆ, ಕೈ, ಕಾಲಿಗೆ ತಲವಾರಿನಿಂದ ದಾಳಿ ನಡೆಸಿದ್ದು ಬಳಿಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಈ ದಾಳಿಯು ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಗಾಯಗೊಂಡ ಅಝೀಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.