ಉಡುಪಿ, ನ. 16 (DaijiworldNews/HR): ಶ್ರೀ ಕೃಷ್ಣ ಮಠದ ಬಳಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಸಮಾಜ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ್ಪಾಡಿ ಮತ್ತು ತಾರನಾಥ್ ರಕ್ಷಿಸಿದ್ದಾರೆ.

ಯುವಕ ಚಿತ್ರದುರ್ಗ ಮೂಲದ ಪದವೀಧರರಾಗಿದ್ದು, ವಿದ್ಯಾಭ್ಯಾಸದ ನಂತರ ಯಾವುದೇ ಉದ್ಯೋಗ ಸಿಗದ ಕಾರಣ ಸಿನಿಮಾಗಳನ್ನು ನೋಡಿ ಅದರಿಂದ ಪ್ರೇರಿತಗೊಂಡು ತೊಂದರೆಗಳು ಬಗೆಹರಿಯುತ್ತವೆ ಎಂದು ಭಾವಿಸಿ ಮನೆ ಬಿಟ್ಟು ಬೇರೆ ಬೇರೆ ಪ್ರದೇಶಗಳಲ್ಲಿ ಅಲೆದಾಡುತ್ತಾ ಭಿಕ್ಷಾಟನೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ.
ಇನ್ನು ವಿಶು ಶೆಟ್ಟಿ ಯುವಕನೊಂದಿಗೆ ಮಾತನಾಡಿ, ಭಿಕ್ಷೆ ಬೇಡುವುದರಿಂದ ಸಮಸ್ಯೆಗಳು ಬಗೆಹರಿಸಲಾಗುವುದಿಲ್ಲ ಎಂದು ಅರ್ಥಮಾಡಿಕೊಟ್ಟು, ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಮನೆಗೆ ಕಳುಹಿಸಿದ್ದಾರೆ.
ವಿಶು ಶೆಟ್ಟಿ ಯುವಕನ ಮನೆಯ ವಿಳಾಸವನ್ನು ಪಡೆದು ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಯುವಕ ಮಾಹಿತಿ ನೀಡದೆ ಮನೆ ಬಿಟ್ಟು ಹೋಗಿದ್ದರಿಂದ ಅವರ ಕುಟುಂಬ ಸದಸ್ಯರು ಈ ವರ್ಷ ದೀಪಾವಳಿ ಆಚರಿಸಲಿಲ್ಲ.
ಆದರೆ ಇದೀಗ ಮಗ ಸಿಕ್ಕಿರುವ ಸಂತೋಷಕ್ಕೆ ಕುಟುಂಬ ಸದಸ್ಯರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದಾಗಿ ತಿಳಿಸಿದ್ದು, ತಮ್ಮ ಮಗನನ್ನು ಮರಳಿ ಪಡೆಯಲು ಸಹಾಯ ಮಾಡಿದ ಉಡುಪಿಯ ಇಬ್ಬರು ಸಾಮಾಜಿಕ ಕಾರ್ಯಕರ್ತರ ಸಹಾಯವನ್ನು ಶ್ಲಾಘಿಸಿದ್ದಾರೆ.