ಕಾಸರಗೋಡು, ಜೂ 04 : ಮೊಗ್ರಾಲ್ ಪುತ್ತೂರು ಕುನ್ನಿಲ್ ಎಂಬಲ್ಲಿನ ಸಾರ್ವಜನಿಕ ಬಾವಿಯೊಂದರಲ್ಲಿ ಕಂಡು ಬಂದ ಮೃತದೇಹದ ಗುರುತು ಪತ್ತೆಯಾಗಿದ್ದು , ಮೃತರನ್ನು ರಾಯಚೂರು ವಿದ್ಯುತ್ ಇಲಾಖೆ ಸಹಾಯಕ ಇಂಜಿನಿಯರ್ ಎಸ್. ಎಸ್ ಕಾರ್ತಿಕ್ ( 30) ಎಂದು ಗುರುತಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗರದಲ್ಲಿರಿಸಲಾಗಿದ್ದ ಮೃತದೇಹವನ್ನು ಸೋಮವಾರ ಬೆಳಿಗ್ಗೆ ಸಂಬಂಧಿಕರು ಆಗಮಿಸಿ ಗುರುತು ಪತ್ತೆಹಚ್ಚಿದ್ದಾರೆ.
ಕಾರ್ತಿಕ್ ರನ್ನು ಕೆಲ ಸಮಯದ ಹಿಂದೆ ವಿಟ್ಲಕ್ಕೆ ವರ್ಗಾವಣೆ ಮಾಡಲಾಗಿತ್ತು . ಮೇ 31 ರಂದು ಮನೆಗೆ ಕರೆ ಮಾಡಿದ ಕಾರ್ತಿಕ್ ಮೂರು ದಿನಗಳ ಬಳಿಕ ಮನೆಗೆ ಬರುವುದಾಗಿ ತಿಳಿಸಿದ್ದನು . ಬಳಿಕ ಮನೆಯವರು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಲಭಿಸುತ್ತಿರಲಿಲ್ಲ . ಇದರಿಂದ ಗಾಬರಿಗೊಂಡ ಮನೆಯವರು ವಿದ್ಯುತ್ ಕಚೇರಿಗೆ ತಲಪಿದಾಗ ಕಚೇರಿಗೆ ತಲಪಿಲ್ಲ ಎಂಬ ಉತ್ತರ ಲಭಿಸಿತು. ಈ ನಡುವೆ ಮೊಗ್ರಾಲ್ ಪುತ್ತೂರಿನ ಸಾರ್ವಜನಿಕ ಬಾವಿಯಲ್ಲಿ ಮೃತದೇಹ ಪತ್ತೆಯಾಯಾಗಿದ್ದು , ಮಾಹಿತಿ ತಿಳಿದ ಕಾರ್ತಿಕ್ ನ ಸಂಬಂಧಿಕರು ಸೋಮವಾರ ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಕಾಸರಗೋಡು ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ. ಕಾರ್ತಿಕ್ ತಿಪಟೂರು ನಿವಾಸಿಯಾಗಿದ್ದಾನೆ. ರವಿವಾರ ಮಧ್ಯಾಹ್ನ ಮೊಗ್ರಾಲ್ ಪುತ್ತೂರು ಕುನ್ನಿಲ್ ನ ಸಾರ್ವಜನಿಕ ಬಾವಿಯಲ್ಲಿ ಕಾರ್ತಿಕ್ ನ ಮೃತದೇಹ ಪತ್ತೆಯಾಗಿತ್ತು. ಬೈಕ್ ಬಾವಿ ಬಳಿ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ಯಾಂಟ್ ನ ಜೇಬಿನಲ್ಲಿ ಮೊಬೈಲ್ , ಪರ್ಸ್ ಲಭಿಸಿತ್ತು