ಮಂಗಳೂರು, ನ. 17 (DaijiworldNews/MB) : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಅಧಿಕಾರಿಗಳು ನವೆಂಬರ್ 16 ರ ಸೋಮವಾರ ಜಿಲ್ಲೆಯಾದ್ಯಂತ ಪಟಾಕಿ ಮಾರಾಟ ಮಾಡುವ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಸರ್ಕಾರದ ಹಸಿರು ಪಟಾಕಿ ಮಾನದಂಡಗಳನ್ನು ಪಾಲಿಸದ ಅಂಗಡಿಗಳಿಂದ ಪಟಾಕಿಗಳನ್ನು ವಶಕ್ಕೆ ಪಡೆದುಕೊಂಡರು.


















ಪಟಾಕಿ ಸಿಡಿಯುವುದರಿಂದ ಉಂಟಾಗುವ ವಾಯುಮಾಲಿನ್ಯವು ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಹಾನಿಕಾರಕ ಎಂದು ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಡಿಮೆ ಮಾಲಿನ್ಯಕಾರಕವಾಗಿರುವ ಹಸಿರು ಪಟಾಕಿಗಳನ್ನು ಸಿಡಿಯಲು ಮಾತ್ರ ಸರ್ಕಾರ ಅವಕಾಶ ನೀಡಿದೆ.
ಆದರೂ ಅನಿಧಿಕೃತವಾಗಿ ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳನ್ನು ಮಾರಾಟ ಮಾಡುವ ಸಾಧ್ಯತೆ ಇರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಪಟಾಕಿ ಅಂಗಡಿಗಳಿಗೆ ಭೇಟಿ ನೀಡುವಂತೆ ತಿಳಿಸಿದರು. ಅಕ್ರಮವಾಗಿ ಪಟಾಕಿ ಮಾರಾಟದ ಬಗ್ಗೆ ಪರಿಶೀಲಿಸುವಂತೆ ಸರ್ಕಾರವೂ ಕೂಡಾ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಟಾಕಿ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದರು.
ಉಳ್ಳಾಲ, ಕೋಟೆಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪಟಾಕಿ ಅಂಗಡಿಗಳಲ್ಲಿ ಕೆಎಸ್ಪಿಸಿಬಿಯ ಅಧಿಕಾರಿಗಳು ಮತ್ತು ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು. ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಮಂಜು ರಾಜಣ್ಣ, ಮಂಗಳೂರು ನಗರ ಪಾಲಿಕೆಯ ಆಯುಕ್ತ ಯಶವಂತ್, ಆರೋಗ್ಯ ಅಧಿಕಾರಿ ಡಾ.ಎ.ಎಂ.ಶೆಟ್ಟಿ, ಕಂದಾಯ ಅಧಿಕಾರಿಗಳಾದ ಅಕ್ಷತ್ ಮತ್ತು ರವೀಂದ್ರ, ಇತರ ಅಧಿಕಾರಿಗಳಾದ ಯಸ್ಮೀನ್, ಕೋಟೆಕಾರ್ ಪ್ರಭಾಕರ್, ಪೊಲೀಸ್ ಉಪ-ತನಿಖಾಧಿಕಾರಿಗಳು ಪ್ರದೀಪ್ ಮತ್ತು ಕಲಾಶ್ರಿ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.