ಮಂಗಳೂರು, ನ.17 (DaijiworldNews/PY): "ಅಬ್ದುಲ್ ಅಝೀಝ್ ಅವರು ಸ್ಥಳೀಯ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದನ್ನು ಸಹಿಸದೇ ಅವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ" ಎಂದು ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಇಬ್ರಾಹಿಂ ಕಲೀಲ್ ಮುಸ್ಲಿಯಾರ್ ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಹೊರವಲಯ ಕೈಕಂಬದ ಕಂದಾವರದಲ್ಲಿ ಸ್ಥಳೀಯ ಮುಖಂಡ ಅಬ್ದುಲ್ ಅಝೀಝ್ ಮೇಲೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಅವರು, "ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುತ್ತದೆ. ಸ್ಥಳೀಯ ಮುಖಂಡನ ಮೇಲಿನ ತಲವಾರು ದಾಳಿಯ ಹಿಂದೆ ಪೂರ್ವ ಸಂಚು ರೂಪಿಸಲಾಗಿದೆ" ಎಂದಿದ್ದಾರೆ.
"ಅಬ್ದುಲ್ ಅಝೀಝ್ ಅವರು ಸ್ಥಳೀಯ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದನ್ನು ಸಹಿಸದೇ ಅವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ. ಇನ್ನು ಈ ದಾಳಿ ಹಿಂದೆ ಸಂಶಯಾಸ್ಪದವಾದ ಐವರ ಹೆಸರನ್ನು ಕೂಡಾ ಈಗಾಗಲೇ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಅವರನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಎಸ್ವೈಎಸ್ನಿಂದ ಪ್ರತಿಭಟನೆ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.