ಮಂಗಳೂರು, ನ.17 (DaijiworldNews/PY): "ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳುನಾಡಿನ ಪಿಲಿನಲಿಕೆಯ ಆಕೃತಿಯನ್ನು ತೆಗೆಯಲಾಗಿದ್ದು, ಬದಲಾಗಿ ಆನೆಯ ಆಕೃತಿಯನ್ನು ಇಡಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ಸಿಇಒಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. 24 ಗಂಟೆಯ ಒಳಗಾಗಿ ಪಿಲಿನಲಿಕೆಯ ಆಕೃತಿಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು" ಎಂದು ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳುನಾಡ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿ ಇದೆ. ಈಗ ಅದಾನಿಯವರ ಲಾಂಭನ ತಂದು ತುಳುನಾಡಿನ ಸಂಸ್ಕೃತಿಯನ್ನು ವಿಮಾನ ನಿಲ್ದಾಣದ ಒಳಗಡೆ ಕೂಡಾ ನಶಿಸುವಂತ ಪ್ರಯತ್ನ ಮಾಡುತ್ತಿದ್ದಾರೆ. 24 ಗಂಟೆಯ ಒಳಗೆ ಆನೆಯ ಆಕೃತಿಯನ್ನು ಬೇಕಾದಲ್ಲಿ ಬೇರೆ ಕಡೆ ಪ್ರತಿಷ್ಠಾಪಿಸಬೇಕು. ಪಿಲಿನಲಿಕೆಯ ಆಕೃತಿಯನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ಆನೆಯ ಆಕೃತಿಯನ್ನು ಬೇಕಾದಲ್ಲಿ ಬೇರೆ ಕಡೆ ಪ್ರತಿಷ್ಠಾಪಿಸಿ. ಆದರೆ, ತುಳುನಾಡಿನ ಸಂಸ್ಕೃತಿಗೆ ಧಕ್ಕೆ ತಂದಲ್ಲಿ ನಾವು ಸಹಿಸುವುದಿಲ್ಲ" ಎಂದು ತಿಳಿಸಿದ್ದಾರೆ.
"ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಹಾಗೂ ಅದಾನಿ ಸಮೂಹಕ್ಕೆ ಹಸ್ತಾಂತರಿಸಲು ಸರ್ಕಾರ ಕೈಗೊಂಡ ಕ್ರಮದಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ನಾವು ಈಗಾಗಲೇ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ" ಎಂದಿದ್ದಾರೆ.
"ಈ ಹಿಂದೆ ಪ್ರಸ್ತಾಪಿಸಿದಂತೆ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕು. ನ.18ರಂದು ಸಂಜೆ ನಗರದ ಸರ್ಕ್ಯೂಟ್ ಹೌಸ್ನಿಂ ವಿಮಾನ ನಿಲ್ದಾಣದವರೆಗೆ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
"ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಕಂಪೆನಿಗೆ ನೀಡಿದ್ದರೂ ಕೂಡಾ ವಿಮಾನ ನಿಲ್ದಾಣದ ಹೆಸರು ಬದಲಾಯಿಸಿಲ್ಲ. ಇನ್ನು ಗುಜರಾತ್ ಸೇರಿದಂತೆ ಮುಂಬೈ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆ ಮಾಡಿ ಗುತ್ತಿಗೆ ಕಂಪೆನಿಯ ಹೆಸರನ್ನು ಸೂಚಿಸಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ವಿಮಾನ ನಿಲ್ದಾಣದ ಮರುನಾಮಕರಣದಲ್ಲಿ ಉಪಕ್ರಮವನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲ. ಕಾಂಗ್ರೆಸ್ ರಾಷ್ಟ್ರೀಕರಣಕ್ಕೆ ಹೆಸರುವಾಸಿಯಾದರೆ, ಬಿಜೆಪಿ ಖಾಸಗೀಕರಣಕ್ಕೆ ಹೆಸರುವಾಸಿಯಾಗಿದೆ" ಎಂದು ತಿಳಿಸಿದ್ದಾರೆ.