ಉಡುಪಿ, ನ.17 (DaijiworldNews/PY): "ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ನಮ್ಮ ನಾಯಕ. ಅವರ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷವಿದೆ . ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿರುವುದು ಸರಿಯಾಗಿದೆ. ಆದರೆ, ರಾಜಕೀಯ ಪ್ರೇರಿತವಾಗಿ ವಿರೋಧ ಪಕ್ಷವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ" ಎಂದು ಉಡುಪಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮ್ಮದ್ ಆಕ್ರೋಶ ಹೊರ ಹಾಕಿದರು.


ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಸಂಪತ್ ರಾಜ್ ಬಂಧನ ಪ್ರಕರಣ ವಿಚಾರವಾಗಿ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲಿಮ್ ಅಹಮ್ಮದ್ ಪ್ರತಿಕ್ರಿಯಿಸಿ, "ಸಂಪತ್ ರಾಜ್ ಬಂಧನ ರಾಜಕೀಯ ಪ್ರೇರಿತವಾಗಿದೆ. ಪೊಲೀಸರು ಕಾನೂನು ಪಾಲನೆ ಮಾಡಲಿ. ಪೊಲೀಸರ ತನಿಖೆಗೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ ತನಿಖೆ ನೆಪದಲ್ಲಿ ರಾಜಕೀಯ ಹಿತಾಸಕ್ತಿ ಸಾಧಿಸಬಾರದು" ಎಂದರು.
"ರಾಜ್ಯದ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರನ್ನು ಗುರಿ ಮಾಡುತ್ತಿದೆ. ಪೊಲೀಸರಿಗಿಂತ ಮೊದಲೇ ಬಿಜೆಪಿಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅವರೇನು ಪೊಲೀಸ್ ಅಧಿಕಾರಿಗಳಾ? ಅಥವಾ ಮಿನಿಸ್ಟರ್ಗಳಾ ?. ಡಿಜೆ ಹಳ್ಳಿ ಕೆಜಿಹಳ್ಳಿ ಪ್ರಕರಣದಲ್ಲಿ ನೂರಕ್ಕೂ ಅಧಿಕ ಜನರ ಬಂಧನವಾಗಿದೆ. ಈ ಘಟನೆ ಪೊಲೀಸ್ ಇಲಾಖೆಯ ವೈಫಲ್ಯದಿಂದ ನಡೆದಿದೆ . ಈ ಘಟನೆಗೆ ಸಂಬಂಧಿಸಿ ಸಾಕಷ್ಟು ಜನ ಅಮಾಯಕರನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
"ಕೇಂದ್ರ ಮತ್ತು ರಾಜ್ಯ ಸರಕಾರ ರೈತರ ಹಿತ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಭೂ ಸುಧಾರಣೆ ಕಾಯ್ದೆ ರೈತ ವಿರೋಧ ಮತ್ತು ಮರಣ ಶಾಸನವಿದ್ದಂತೆ. ಕೊರೊನಾದ ಹಿನ್ನಲೆಯಲ್ಲಿ ರಾಜ್ಯ ಸರಾಕಾರ ವಿಫಲವಾಗಿದೆ ಎಂದು ಬಿಜೆಪಿ ನೇತೃತ್ವದ ಸರಕಾರವನ್ನು ದೂರಿದರು. ಈ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನ ಸಭೆ, ವಿಧಾನ ಪರಿಷತ್ನಲ್ಲೂ ಸಾರಿ ಹೇಳಿದ್ದೇವೆ. ಪಿಪಿಇ ಕಿಟ್ ಖರೀದಿಯಲ್ಲಿ ಹಾಗೂ ಇನ್ನಿತರ 2000 ಕೋಟಿ ಹಗರಣ ಆಗಿದೆ" ಎಂದು ಆರೋಪಿಸಿದರು.