ಮಂಗಳೂರು, ನ.17 (DaijiworldNews/PY): "ಸೋತಲ್ಲೆಲ್ಲಾ ಮತ ಯಂತ್ರ ಹಾಳಾಗಿದೆ ಎನ್ನುವ ಕಾಂಗ್ರೆಸ್ ಪಕ್ಷ, ಅವರು ಗೆದ್ದ ಕಡೆ ಮತಯಂತ್ರ ಏನಾಗಿರುತ್ತೆ?. ಯಾವುದೇ ರಾಜಕೀಯ ಪಕ್ಷವಿರಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸಿದ್ಧರಾಮಯ್ಯ ಗೆದ್ದಾಗ ಮತಯಂತ್ರ ಸರಿ ಇತ್ತು. ಈಗ ಸೋತಾಗ ಹಾಳಾಗಿದೆ ಎನ್ನುತ್ತಾರೆ. ಇಂತಹ ಮಾತುಗಳು ಅವರಂತಹ ದೊಡ್ಡ ಒಳ್ಳೆಯ ವ್ಯಕ್ತಿಗಳಿಗೆ ಭೂಷಣವಲ್ಲ. ಮತಯಂತ್ರ ಕೆಟ್ಟಿಲ್ಲ, ಮನಸ್ಸು ಕೆಟ್ಟಿದೆ" ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟರು.


ಸುದ್ದಿಗಾರರೊಂದಿಗೆ ಮಾತಾಡಿದ ಅವರು, "ಎಲ್ಲಾ ಆರೋಗ್ಯ ಇಲಾಖೆಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಕಡೆಗಳಲ್ಲಿ ಏನಾದರೂ ಲೋಪಗಳಾಗಿದ್ದಲ್ಲಿ, ಸಾರ್ವಜನಿಕರಿಂದ ದೂರು ಬಂದಲ್ಲಿ, ಸಮೀಪದ ಆಸ್ಪತ್ರೆಗೆ ಅಗತ್ಯವಿದ್ದಲ್ಲಿ ಅಲ್ಲಿ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಸಣ್ಣ ಪುಟ್ಟ ದೂರುಗಳು ಬರುವುದು ಸಾಮಾನ್ಯ. ಅದನ್ನು ಸರಿ ಪಡಿಸುತ್ತೇವೆ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
"ಕೊರೊನಾ ಹಾವಳಿಯಿಂದ ಸಪ್ತಪದಿ ಕಾರ್ಯಕ್ರಮ ಸ್ಥಗಿತಗೊಂಡಿದೆ. ಕೊರೊನಾ ನಿಯಮಗಳನ್ನು ಅಳವಡಿಸಿಕೊಂಡು ಮುಹೂರ್ತ ನಿಗದಿ ಪಡಿಸುತ್ತೇವೆ. ಕೋಟೇಶ್ವರದ ಕೊಡಿ ಜಾತ್ರೆ, ಉಪ್ಪುಂದದ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲೆಲ್ಲಿ ಸಾಂಪ್ರದಾಯಿಕವಾದ ಪೂಜೆ, ಪುನಸ್ಕಾರಗಳು ನಡೆಯಬೇಕೋ ಅಲ್ಲೆಲ್ಲಾ ಕೊರೊನಾ ನಿಯಮಾನುಸಾರ ನಡೆಸುವ ಬಗ್ಗೆ ಸೂಚನೆ ನೀಡಲಾಗಿದೆ" ಎಂದರು.
ಕೊಡೇರಿ - ಉಪ್ಪುಂದದ ಮೀನುಗಾರರ ನಡುವಿನ ಭಿನ್ನಾಭಿಪ್ರಾಯ: "ಮೀನುಗಾರ ನಿರ್ದೇಶಕರಾದ ರಾಮಾಚಾರಿಯವರು ಎರಡೂ ಗುಂಪಿನೊಂದಿಗೆ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಯವರೂ ಎರಡೂ ಗುಂಪನ್ನು ಕರೆದು ಸಮನ್ವಯತೆ ತಂದಿದ್ದಾರೆ. ಇದು ಸೂಕ್ಷ್ಮ ವಿಚಾರವಾಗಿದ್ದು, ಅಲ್ಲಿಯೇ ಪರಿಹಾರವಾಗಬೇಕೆಂಬುದು ಸರ್ಕಾರದ ಆಶಯ" ಎಂದರು.
ಪಾರ್ಟಿಯ ತೀರ್ಮಾನಕ್ಕೆ ಬದ್ಧ: "ಸಚಿವ ಸಂಪುಟ ವಿಸ್ತರಣೆಯ ಪರಮಾಧಿಕಾರ ಇರುವುದು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು, ಪಾರ್ಟಿಯ ತೀರ್ಮಾನಕ್ಕೆ ನಮ್ಮ ಸಹಕಾರವಿದೆ" ಎಂದರು.