ಮಂಗಳೂರು, ಜೂ 05: ಮೇ 29 ರಂದು ಸುರಿದ ಭಾರೀ ಮಳೆಗೆ ಕರಾವಳಿಯ ಜನರು ತೊಂದರೆಗೀಡಾಗಿದ್ದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಮಹಾಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜೂನ್ 7 ರ ಬಳಿಕ ಕೇರಳ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದ್ದು ಪ್ರವಾಹ ಪರಿಸ್ಥಿತಿ ಪುನರಾವರ್ತನೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ನೈರುತ್ಯ ಮಾರುತಗಳು ಬಿರುಸುಗೊಂಡಿರುವುದರಿಂದ ಮಳೆಯಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲಾಖೆಯ ಮುನ್ಸೂಚನೆ ಪ್ರಕಾರ ಜೂ 7 ರ ಬಳಿಕ ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂ. 7 ರಿಂದ ಆರಂಭಗೊಂಡು 1 ವಾರದ ಅವಧಿಯಲ್ಲಿ ಕರಾವಳಿ ಕರ್ನಾತಕ ಗೋವಾ ಮುಂಬಯಿ ಕರಾವಳಿಯಲ್ಲಿ ಪ್ರವಾಹ ಮಾದರಿಯಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.
ಜೂ 5,6 ರಂದು ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡದಲ್ಲಿ ಗಾಳಿ ಮಳೆಯೊಂದಿಗೆ ಗುಡುಗು ಕಾಣಿಸಿಕೊಳ್ಳಲಿದೆ. ಬಳಿಕ ಮಳೆ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ..ಇನ್ನು ಗೋವಾ ಭಾಗದಲ್ಲಿ ರೂಪುಗೊಳ್ಳುತ್ತಿರುವ ಸುಳಿಗಾಳಿ ಮಹಾರಾಷ್ಟ್ರ ಕರಾವಳಿಯತ್ತ ಸಾಗುವ ನಿರೀಕ್ಷೆ ಇದ್ದು ಮುಂಗಾರಿನ ಪ್ರಭಾವವೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.