ಬೆಂಗಳೂರು, ಜೂ 05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೊಳಗಾದ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸುವಂತೆ ಸಿಬಿಐ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಿಐಡಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಇಬ್ಬರು ಸಾಕ್ಷಿಗಳ ಹೇಳಿಕೆ ದಾಖಲಿಸಿಲ್ಲ ಎಂದು ಆಕ್ಷೇಪಿಸಿ ಸೌಜನ್ಯ ತಂದೆ ಚಂದ್ರಪ್ಪ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ ಪ್ರತಿವಾದಿಗಳಾದ ಸಿಐಡಿ , ಬೆಳ್ತಂಗಡಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ , ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂತೋಷ್ ರಾವ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ 18 ಕ್ಕೆ ಮುಂದೂಡಿತು.
ಆರಂಭದಲ್ಲಿ ಪ್ರಕರಣ ತನಿಖೆ ನಡೆಸಿದ್ದ ಬೆಳ್ತಂಗಡಿಠಾಣೆ ಪೊಲೀಸರು ಸಾಕ್ಷಿಗಳಾಗಿ ಹರೀಶ್ ಹಾಗೂ ಗೋಪಾಲ್ ಅವವ್ರ್ ಅಹೇಳಿಕೆಗಳನ್ನು ದಾಖಲಿಸಿದ್ದರು. ಆದರೆ ಸಿಬಿಐ ಅಧಿಕಾರಿಗಳು ಈ ಇಬ್ಬರ ಹೇಳಿಕೆ ದಾಖಲಿಸದೆ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮರು ತನಿಖೆ ನಡೆಸುವಂತೆ ಸಿಬಿಐ ಗೆ ನಿರ್ದೇಶಿಸಲು ಅರ್ಜಿದಾರ ಚಂದ್ರಪ್ಪ ಗೌಡ ಕೋರಿದ್ದಾರೆ.
ಉಜಿರೆಯ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು ಎಂದು ತಂದೆ ಚಂದ್ರಪ್ಪ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿ ದೂರು ನೀಡಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು.
ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ತೀವ್ರ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ತನಿಖೆ ಬಳಿಕ ಸಿಬಿಐ 14 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ದೋಷ ಇದ್ದಿರುವುದಾಗಿ ಸೌಜನ್ಯ ತಂದೆ ವಕೀಲರ ಮೂಲಕ ಸಿಬಿಐ ಕೋರ್ಟ್ ಗಮನಕ್ಕೆ ತಂದು ಮರು ತನಿಖೆಗೆ ಆದೇಶ ನೀಡಬೇಕೆಂದು ಮೇಲ್ಮನವಿ ಸಲ್ಲಿಸಿದ್ದರು.