ಮಂಗಳೂರು, ನ. 18 (DaijiworldNews/MB) : ''ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು 45 ದಿನಗಳ ಕಾಲ ಕೈಗೊಳ್ಳಲಾಗುವುದು. ಮುಂದಿನ ವರ್ಷ ಜನವರಿ 15 ರಿಂದ ದೇಶಾದ್ಯಂತ ಈ ಕಾರ್ಯ ಪ್ರಾರಂಭವಾಗುತ್ತದೆ'' ಎಂದು ಉಡುಪಿಯ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥರವರು ಹೇಳಿದರು.





















ನವೆಂಬರ್ 17 ರ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಈ ಮಹತ್ತರವಾದ ಕಾರ್ಯದಲ್ಲಿ ಎಲ್ಲಾ ಜನರು ಪಾಲುದಾರರಾಗುವಂತೆ ದೇಣಿಗೆ ಸಂಗ್ರಹವನ್ನು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊರ್ವ ಭಕ್ತರು ಭಕ್ತರು ಹತ್ತು ರೂಪಾಯಿಗಿಂತ ಅಧಿಕ ಹಾಗೂ ತಮ್ಮ ಕುಟುಂಬದ ಪರವಾಗಿ 100 ರೂ. ದೇಣಿಗೆಯನ್ನು ನೀಡಬೇಕು. ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ಕಾರ್ಯವನ್ನು ಕೈಗೊಳ್ಳಲಾಗುವುದು'' ಎಂದು ಹೇಳಿದರು.
ಸ್ವಾಮೀಜಿ ಇತ್ತೀಚೆಗೆ ಅಯೋಧ್ಯೆ, ಪ್ರಯಾಗ್, ವಾರಣಾಸಿ ಮುಂತಾದ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದರು. ವರು ವಿಶ್ವ ಹಿಂದೂ ಪರಿಷತ್ ಮಾರ್ಗದರ್ಶಿ ಮಂಡಳಿ ಮತ್ತು ರಾಮಜನ್ಮಭೂಮಿ ಟ್ರಸ್ಟ್ನ ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳವಾರ ನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾದರು.
"ರಾಮನಿಗೆ ಅರ್ಪಿತವಾದ ದೇವಾಲಯವು ಸಂಪೂರ್ಣವಾಗಿ ಬಂಡೆಗಳಿಂದ ನಿರ್ಮಿಸಲ್ಪಡುತ್ತದೆ. ಆದ್ದರಿಂದ, ಭೂಮಿಯ ಸಾಮರ್ಥ್ಯವನ್ನು ಅಧ್ಯಯನ ಮಾಡಲಾಗುತ್ತಿದೆ. ಸುಮಾರು 200 ಅಡಿ ಆಳದವರೆಗೂ ಪರೀಕ್ಷೆಗಳನ್ನು ನಡೆಸಲಾಗುವುದು. ಅಲ್ಲಿನ ಭೂಮಿ ಗಟ್ಟಿಯಾಗಿಲ್ಲ, ಅದು ಸಡಿಲವಾದ ಮಣ್ಣಿನಿಂದ ಕೂಡಿದೆ ಆದ್ದರಿಂದ, ಬಲವಾದ ಅಡಿಪಾಯ ಹಾಕುವ ಮೊದಲು ವಿವರವಾದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಿರ್ಮಾಣ ಪೂರ್ಣಗೊಳ್ಳಲು ಸುಮಾರು ಮೂರೂವರೆ ವರ್ಷಗಳು ಬೇಕಾಗುತ್ತದೆ'' ಎಂದು ವಿವರಿಸಿದರು.
''ನಿರ್ಮಾಣ ಕಾರ್ಯವು ವಾಸ್ತು ಪ್ರಕಾರ ನಡೆಯುವಂತೆ ವಾಸ್ತು ತಜ್ಞರು ನೋಡಿಕೊಳ್ಳುತ್ತಾರೆ. ವಾಸ್ತು ತಂಡದಲ್ಲಿ ಕರಾವಳಿ ಕರ್ನಾಟಕದ ಇಬ್ಬರಾದ ಕುಡುಪು ಕೃಷ್ಣರಾಜ್ ತಂತ್ರಿ ಹಾಗೂ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಇದ್ದಾರೆ. ತಂಡದಲ್ಲಿ ಕೇರಳದ ಒಬ್ಬ ವ್ಯಕ್ತಿ ಮತ್ತು ಇಬ್ಬರು ಉತ್ತರ ಭಾರತದವರಾಗಿದ್ದಾರೆ'' ಎಂದು ತಿಳಿಸಿದರು.
"ಎಲ್ ಅಂಡ್ ಟಿ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡರೆ, ಟಾಟಾ ಕನ್ಸಲ್ಟೆನ್ಸಿ ಪ್ರತಿಯೊಂದು ಹಂತದಲ್ಲೂ ತಪಾಸಣೆ ನಡೆಸಲಿದೆ. ಶ್ರೀ ರಾಮ ಮಂದಿರ ನಿರ್ಮಾಣದೊಂದಿಗೆ ದೇಶದ ಸಂಸ್ಕೃತಿಯ ಪುನರುಜ್ಜೀವನವಾಗಲಿದೆ'' ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.