ಮಂಗಳೂರು, ಜೂ 5 : ಹೊಸಬರು ಇಂಧನ ಖಾತೆ ಸಚಿವರಾದರೆ ಹಿಂದಿನ ಅಕ್ರಮಗಳ ಪತ್ತೆ ಮಾಡಬಹುದೆಂಬ ಭಯದಿಂದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮತ್ತೆ ಅದೇ ಖಾತೆಗೆ ಪಟ್ಟು ಹಿಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಜೂನ್ 5 ರ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ರಾಜ್ಯದಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಇಂಧನ ಖಾತೆ ನಿರ್ವಹಿಸಿದೆ. ಈ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಆಗಿನ ಇಂಧನ ಸಚಿವರು ಅದೇ ಖಾತೆಗೆ ಪಟ್ಟು ಹಿಡಿದಿದ್ದಾರೆ. ನಾನು ಈ ಖಾತೆ ನಿರ್ವಹಿಸುವ ಮುಂಚೆ ಹಿಂದೆ ಇಂಧನ ಸಚಿವರಾಗಿದ್ದವರು ಹೇಗೆ ಆ ಖಾತೆ ನಿರ್ವಹಿಸಿದ್ದರು ಎಂಬುದು ನನಗೆ ಗೊತ್ತಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂಧನ ಖಾತೆಯಲ್ಲಿ ಬಹುದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ. ಹೀಗಾಗಿ ಬೇರೆ ಯಾರಾದರೂ ಇಂಧನ ಖಾತೆ ಸಚಿವರಾದರೆ ಅಕ್ರಮಗಳನ್ನು ಪತ್ತೆ ಮಾಡಬಹುದು ಎಂಬ ಭಯ ಹಿಂದಿನ ಸಚಿವರಿಗೆ ಇದೆ. ಈ ಕಾರಣಕ್ಕಾಗಿಯೇ ಮತ್ತೆ ತಮಗೆ ಅದೇ ಖಾತೆ ಬೇಕೆಂದು ಖ್ಯಾತೆ ತೆಗೆದಿದ್ದಾರೆ ಎಂದರು.
ವಿದೇಶದಿಂದ ಕಪ್ಪು ಹಣ ವಾಪಸ್ ತರುವುದು ಮತ್ತು ಗಂಗಾನದಿ ಶುದ್ಧೀಕರಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಪೇಜಾವರ ಶ್ರೀಗಳು ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ತಿಳುವಳಿಕೆಯ ಕೊರತೆಯಿಂದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರಬಹು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಮುಂಬರುವ ದಿನಗಳಲ್ಲಿ ನಮ್ಮ ಪಕ್ಷದ ಹಿರಿಯರು ಕೇಂದ್ರ ಸರ್ಕಾರ ದೇಶದ ರಕ್ಷಣೆ ವಿಚಾರದಲ್ಲಿ, ವಿದೇಶದಲ್ಲಿ ಗೌರವ ಸಿಗುವ ರೀತಿ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.