ಉಡುಪಿ, ನ. 18 (DaijiworldNews/SM): ಮಂಗಳ ಮುಖಿಯರನ್ನು ನಾಗರಿಕ ಸಮಾಜ ಒಂದು ರೀತಿಯ ಪ್ರತ್ಯೇಕ ಭಾವನೆಯಿಂದಲೇ ಕಾಣುತ್ತಿದೆ. ನಾಗರಿಕ ಸಮಾಜದಿಂದ ದೂರ ಇರುವ ಮಂಗಳಮುಖಿಯರು ಮಾನವೀಯ ಕಾರ್ಯ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲರಿಂದಲೂ ಅವಮಾನಕ್ಕೆ, ಅವಹೇಳನಕ್ಕೆ ಈಡಾಗಿರುವ ಉಡುಪಿಯ ಮಂಗಳಮುಖಿಯರ ತಂಡವೊಂದು ಮಾಡಿರುವ ಮಾನವೀಯ ಕಾರ್ಯವಂತೂ ನಿಜಕ್ಕೂ ಶ್ಲಾಘನೀಯ.



ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರಿನ ನಿವಾಸಿ ಆರಾಧ್ಯ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಶ್ರವಣದೋಷದಿಂದ ಬಳಲುತ್ತಿತ್ತು. ಮಗುವಿನ ಚಿಕಿತ್ಸೆಗೆ ಬರೋಬ್ಬರಿ 14 ಲಕ್ಷ ರೂ.ಗಳ ಅಗತ್ಯತೆ ಇತ್ತು. ಮಾತ್ರವಲ್ಲ, ಮೂರು ತಿಂಗಳ ಒಳಗಾಗಿ ಈ ಸರ್ಜರಿ ಮಾಡಲೇಬೇಕಿತ್ತು.
ಈ ವಿಷಯ ತಿಳಿದುಕೊಂಡ ಉಡುಪಿಯ ಮಂಗಳಮುಖಿಯರ ತಂಡ ಆ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಹಣಸಂಗ್ರಹ ಮಾಡಿದೆ. ಮಂಗಳಮುಖಿಯರ ತಂಡದ ನೇತೃತ್ವ ವಹಿಸಿದವರು ಸಮೀಕ್ಷಾ ಎಂಬವರು. ಎಂಬಿಎ ಪದವೀಧರೆಯಾಗಿರುವ ಸಮೀಕ್ಷಾ ತನ್ನ ತಂಡದವರಾದ ಸಾನ್ವಿ, ರೇಖಾ ,ಸಂಧ್ಯಾ ,ನಿಶಾ ಲಾವಣ್ಯ ಎಂಬುವರು ಉಡುಪಿ ಜಿಲ್ಲಾದ್ಯಂತ ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ ಪ್ರದೇಶ ಮತ್ತು ಮನೆಗಳಿಗೆ ತೆರಳಿ ಎರಡೂವರೆ ವರ್ಷದ ಪುಟ್ಟ ಕಂದಮ್ಮಳಿಗಾಗಿ ಹಣ ಸಂಗ್ರಹ ಮಾಡಿದೆ. ಸುಮಾರು 21 ಸಾವಿರದಷ್ಟು ದಾನಿಗಳಿಂದ ಹಣ ಸಂಗ್ರಹಿಸಿ ಅದನ್ನು ಮಗುವಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಮಂಗಳಮುಖಿಯರು ಮಾನವೀಯತೆ ಮೆರೆದಿದ್ದಾರೆ. ಮೇಲ್ನೋಟಕ್ಕೆ ಈ ಹಣ ಸಣ್ಣ ಮೊತ್ತ ಎಂದು ತೋರಬಹುದು, ಆದರೆ ಮಗುವಿಗಾಗಿ ಮಿಡಿದ ಮಂಗಳಮುಖಿಯರ ಮಾನವಿಯತೆ ಬೆಲೆಕಟ್ಟಲು ಅಸಾಧ್ಯವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಆಶ್ರಯ ಸಮುದಾಯ ಸಂಘಟನೆ ಎಂಬ ಸಂಘಟನೆಯನ್ನು ಮಂಗಳಮುಖಿಯರು ಮಾಡಿಕೊಂಡಿದ್ದಾರೆ ಇದರಲ್ಲಿ 283 ಜನ ಸದಸ್ಯರಿದ್ದಾರೆ. ಪಿಯುಸಿ ಮಾಡಿದವರು, ಪದವಿ ಮಾಡಿದವರು, ಎಂಬಿಎ ಕಲಿತವರು, ಮತ್ತು ಬಿಬಿಎಂ ಕಲಿತವರು ಈ ಸಂಘಟನೆಯಲ್ಲಿ ಇದ್ದಾರೆ.