ಮಂಗಳೂರು, ನ. 18 (DaijiworldNews/SM): ಹಲವಾರು ಗತ ಇತಿಹಾಸಗಳನ್ನು ಕಳೆದು ಶತಮಾನದ ಇತಿಹಾಸವನ್ನು ಬರೆದು ಸೇವೆಯೊಂದೇ ದ್ಯೇಯ ಎಂಬಾರ್ಥದಿ ಮುನ್ನುಗ್ಗುತ್ತಿರುವ ಮಂಗಳೂರಿನ ಅಪೋಸ್ತೋಲಿಕ್ ಕಾರ್ಮೆಲ್ ಸಂಸ್ಥೆ ಇದೀಗ 150ರ ಸಂಭ್ರಮದಲ್ಲಿದೆ. ಸರಳ ಸಂಭ್ರಮದೊಂದಿಗೆ ಒಂದುವರೆ ಶತಮಾನದ ಇತಿಹಾಸವನ್ನು ಸಂಸ್ಥೆ ಬರೆಯಲಿದೆ. ನವಂಬರ್ 19ರ ಗುರುವಾರದಂದು ರೊಸಾರಿಯೋ ಕ್ಯಾಥೆಡ್ರಾಲ್ ನಲ್ಲಿ ನಡೆಯುವ ಸರಳ ಸಂಭ್ರಮದಲ್ಲಿ 150 ವಸಂತಗಳನ್ನು ಪೂರೈಸಿ ಹೊಸ ದಿಸೆಯೊಂದಿಗೆ ಮತ್ತಷ್ಟು ಸೇವೆ ನೀಡುವ ಇಂಗಿತದೊಂದಿಗೆ ಸಂಸ್ಥೆ ಮುನ್ನುಗ್ಗಲಿದೆ.




ಇತಿಹಾಸದ ಪುಟಗಳನ್ನು ತಿರುಚಿದಾಗ ಅಪೋಸ್ತೋಲಿಕ್ ಕಾರ್ಮೆಲ್ ಸಂಸ್ಥೆಗೆ ಸೇರಿದ ಕುತೂಹಲ ಭರಿತವಾದ ಅದೆಷ್ಟೋ ವಿಚಾರಗಳು ದೊರೆಯುತ್ತವೆ. ಸಂಸ್ಥೆ 1870ರ ನವೆಂಬರ್ 19ರಂದು ಲೋಕ ಕಲ್ಯಾಣ ಕಾರ್ಯದ ಅಂಬೆಗಾಲನ್ನಿರಿಸಿತು. ಮಾತೆ ವೆರೋನಿಕಾ ಮೊದಲ ಸುಪೀರಿಯರ್ ಆಗಿದ್ದರೆ, ಅವರ ಮಾರ್ಗಗಳನ್ನೇ ಅನುಸರಿಸಿಕೊಂಡಿದ್ದ ಮಾತೆ ಮಾರಿ ದೆಸ್ ಆಂಜ್ ಸಂಸ್ಥೆಯ ಸೇವಾ ಕೈಂಕರ್ಯಗಳನ್ನು ಮತ್ತಷ್ಟು ವಿಸ್ತರಣೆಗೊಳ್ಳಲು ಮುನ್ನುಡಿ ಬರೆದರು.
ಅಪೋಸ್ತೋಲಿಕ್ ಕಾರ್ಮೆಲ್ ಸಂಸ್ಥೆಯ ಮೂವರು ಭಗಿನಿಯರು ಹಾಗೂ ಕ್ಲಾಯಿಸ್ಟರ್ ಕಾರ್ಮೆಲ್ ಸಂಸ್ಥೆಯ ಮೂವರು ಭಗಿನಿಯರು ಮಂಗಳೂರಿಗೆ ಪಾದಾರ್ಪಣೆ ಮಾಡಿ ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣದ ತಮ್ಮ ಧ್ಯೇಯಕ್ಕೆ ಮುನ್ನುಡಿ ಬರೆದರು. ಭಾರತ ದೇಶದಲ್ಲಿ ಶಿಕ್ಷಣ ಇತೀಹಾಸದಲ್ಲೇ ಇದೊಂದು ಮಹತ್ವದ ಹೆಜ್ಜೆ ಎಣಿಸತೊಡಗಿತು.
1870ರ ಕಾಲ ಘಟ ಭಾರತದಲ್ಲಿ ಸವಾಲಿನದ್ದಾಗಿತ್ತು. ಬ್ರಿಟೀಷ್ ಆಕ್ರಮಿತ ಭಾರತದಲ್ಲಿ ಮಂಗಳೂರಿನ ಗ್ರಾಮೀಣ ಭಾಗಗಳಲ್ಲಿ ಅಧುನಿಕ ಸವಲತ್ತುಗಲೇ ಮಾಯವಾಗಿತ್ತು. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ, ಓಡಾಡಲು ವಾಹನದ ವ್ಯವಸ್ಥೆಯೂ ಇಲ್ಲದೆ, ಜೊತೆಗೆ ವಿದ್ಯುತ್ ಇಲ್ಲದೆ, ತೀರಾ ಸಂಕಷ್ಟದಲ್ಲಿ ಜನರು ಜೀವನ ಸಾಗಿಸುತ್ತಿದ್ದರು. ಟೈಫಾಯ್ಡ್, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳಿಂದ ಜನರು ನರಳುತ್ತಿದ್ದರು. ಅಂದಿನ ಪರಿಸ್ಥಿತಿಯೇ ಶೋಚನೀಯವಾಗಿತ್ತು.
ಅನಕ್ಷರತೆ ಹಾಗೂ ಬಾಲ್ಯವಿವಾಹವಂತು ತಾಂಡವವಾಡುತ್ತಿದ್ದ ದಿನಗಳಾಗಿದ್ದವು. ಈ ಎಲ್ಲಾ ಪರಿಸ್ಥಿತಿಗಳನ್ನು ಅಪೋಸ್ತೋಲಿಕ್ ಕಾರ್ಮೆಲ್ ಸಂಸ್ಥೆ ದೃತಿ ಗೆಡದೆ, ಅವುಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿತು. ಮಹಿಳಾ ಶಿಕ್ಷಣದಿಂದಲೇ ಆಧುನಿಕ ಸಮಾಜ ನಿರ್ಮಾಣ ಸಾಧ್ಯ ಎಂದು ಅರಿತು ಮಹಿಳೆಯರ ಅಭ್ಯುದಯಕ್ಕಾಗಿಯೇ ಮಾತೆ ವೆರೋನಿಕಾ ಮುಂದಡಿಯಿಟ್ಟರು.
ಅಪೋಸ್ತೋಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಮಹಿಳಾ ಶಿಕ್ಷಣಕ್ಕೆ ಭದ್ರ ಬುನಾದಿ ನೀಡಿದ ಮಾತೆ ಮಾರಿ ದೆಸ್ ಆಂಜ್ ಹಾಗೂ ಮಾತೆ ಅಲೋಷಿಯಸ್ ರವರ ಸಹಭಾಗಿತ್ವದಲ್ಲಿ ಮಾತೆ ವೆರೋನಿಕಾರ ಧ್ಯೇಯ ಯಶಸ್ಸಿನ ಹಾದಿಯತ್ತ ಸಾಗಿತು. ಮಹಿಳಾ ಶಿಕ್ಷಣದ ನಿಟ್ಟಿನಲ್ಲಿ ಆರಂಭವಾದ ಸೈಂಟ್ ಆನ್ಸ್ ಸಂಸ್ಥೆ ಆರಂಭದಲ್ಲಿ ಕಡಿಮೆ ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿ ಬಳಿಕ ಬೆಳೆಯುತ್ತಲೇ ಸಾಗಿತು. ಗುಣಮಟ್ಟದ ಶಿಕ್ಷಣವೇ ಇದಕ್ಕೆ ಸಾಕ್ಷಿಯಾಯಿತು. ಇದೇ ಕಾರಣದಿಂದ ವಿದ್ಯಾರ್ಥಿಗಳ ಪೋಷಕರಿಂದಲೂ ತಮ್ಮೂರುಗಳಲ್ಲಿ ವಿದ್ಯಾಲಯಗಳನ್ನು ಆರಂಭಿಸಬೇಕೆಂಬ ಬೇಡಿಕೆ ಹೆಚ್ಚಾಯಿತು.
ಈ ನಡುವೆ ನಗರದಲ್ಲಿ 1920-1921ರಲ್ಲಿ ಸೈಂಟ್ ಆಗ್ನೇಸ್ ಕಾಲೇಜು ಆರಂಭಿಸಿ ಅತಿ ಶ್ರೇಷ್ಠವಾದ ಶಿಕ್ಷಣ ಕ್ಷೇತ್ರದ ಕೊಡುಗೆಗೆ ಚಾಲನೆ ನೀಡಲಾಯಿತು. ಸೈಂಟ್ ಆನ್ಸ್ ಕಾನ್ವೆಂಟ್ ಪ್ರಸ್ತುತ ಮಾತೃ ಭಾಗಿನಿ ಮಠವಾಗಿ ಸೇವೆಯಲ್ಲಿದೆ. ಆದರೆ ಸಂಸ್ಥೆಯ ಬೇರುಗಳು ಕವಲೊಡೆದು ಜಗತ್ತಿನ ಬೇರೆ ಬೇರೆ ದಿಕ್ಕುಗಳತ್ತ ಸಾಗಿವೆ. ಎಲ್ಲೆಡೆ ಸಂಸ್ಥೆಗಳನ್ನು ಆರಂಭಿಸಿ ಇಂದಿಗೂ ಹೆಣ್ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಾಸ್ತ್ಯ ನೀಡಲಾಗುತ್ತಿದ್ದು, ಜನ ಮನ್ನಣೆಗಳಿಸಿಕೊಂಡಿದೆ. ಪ್ರಸ್ತುತ ಸಂಸ್ಥೆ ೧೫೦ ವಸಂತಗಳನ್ನು ಪೂರೈಸಿದ್ದು, ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂಬುವುದು ಆಶಯ.