ಮಂಗಳೂರು, ನ. 19 (DaijiworldNews/MB) : "ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳುನಾಡ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿ ಇದ್ದು ಈಗ ಅದಾನಿಯವರ ಲಾಂಭನ ತಂದು ತುಳುನಾಡಿನ ಸಂಸ್ಕೃತಿಯನ್ನು ವಿಮಾನ ನಿಲ್ದಾಣದ ಒಳಗಡೆ ಕೂಡಾ ನಶಿಸುವಂತ ಪ್ರಯತ್ನ ಮಾಡುತ್ತಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳುನಾಡಿನ ಪಿಲಿನಲಿಕೆಯ ಆಕೃತಿಯನ್ನು 24 ಗಂಟೆಯ ಒಳಗಾಗಿ ಮರು ಪ್ರತಿಷ್ಠಾಪನೆ ಮಾಡಬೇಕು" ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನವೆಂಬರ್ ೧೭ ರಂದು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದು ನವೆಂಬರ್ 18 ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸಲಾಗಿದ್ದ ಪಿಲಿನಲಿಕೆ ಆಕೃತಿ ಮತ್ತೆ ಮೂಲ ಸ್ಥಾನದಲ್ಲಿ ಸ್ಥಾಪನೆ ಮಾಡಲಾಗಿದೆ.

ಮೂಲ ಸ್ಥಾನಕ್ಕೆ ಸ್ಥಳಾಂತರಗೊಂಡ ಪಿಲಿನಲಿಕೆ ಆಕೃತಿ



ಪಿಲಿನಲಿಕೆ ಆಕೃತಿ ಇದ್ದ ಜಾಗದಲ್ಲಿ ಸ್ಥಾಪಿಸಲಾಗಿದ್ದ ಅದಾನಿ ಗ್ರೂಪ್ ಲೋಗೋ
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಮಿಥುನ್ ರೈ ಅವರು, "ನಾನು ಅದಾನಿ ಗ್ರೂಪ್ನ ಪಿಆರ್ಒ ಜೊತೆ ಮಾತನಾಡಿದ್ದೇನೆ. ನಮ್ಮ ಜನರ ಭಾವನೆಗಳೊಂದಿಗೆ ಆಟವಾಡದಂತೆ ತಿಳಿಸಿದ್ದೇನೆ. ಮೊದಲು ಇದ್ದ ಸ್ಥಳದಲ್ಲೇ ಆಕೃತಿಯನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದೇನೆ. ಪಿಲಿನಲಿಕೆ ತುಳುನಾಡ ಹೆಮ್ಮೆ ಮತ್ತು ಸಂಸ್ಕೃತಿ. ಅದು ಮಂಗಳೂರಿನ ಪ್ರತಿ ತುಳುವರ ರಕ್ತದಲ್ಲಿದೆ. ದಯವಿಟ್ಟು ನಮ್ಮ ಭಾವನೆಗಳನ್ನು ಗೌರವಿಸಿ ಎಂದು ಹೇಳಿದ್ದೇನೆ'' ಎಂದು ತಿಳಿಸಿದ್ದಾರೆ.
''ತುಳುನಾಡಿನ ಹೆಮ್ಮೆ ಮತ್ತು ಸಂಸ್ಕೃತಿಯನ್ನು ಮರೆಮಾಚಲು ಸಾಧ್ಯವಿಲ್ಲ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪಿಲಿನಲಿಕೆಯ ಆಕೃತಿ ಸ್ಥಳಾಂತರ ಪ್ರತಿ ತುಳುವನ ಆಶಯ ಮತ್ತು ಇಚ್ಛೆಗೆ ವಿರುದ್ಧವಾಗಿದೆ. ಪಿಲಿನಲಿಕೆ ಎಂಬುದು ಬೇರೆ ಕಡೆಯಿಂದ ಮಂಗಳೂರಿಗೆ ಬರುವ ಜನರಿಗೆ ಗೋಚರಿಸುವ ತುಳುನಾಡಿನ ಕಲೆ ಮತ್ತು ಸಂಸ್ಕೃತಿ'' ಎಂದರು.
ಈ ಹಿಂದೆ ವಿಮಾನ ನಿಲ್ದಾಣ ನಿರ್ವಹಣೆಯನ್ನು ಅದಾನಿ ಗ್ರೂಪ್ಗೆ ಹಸ್ತಾಂತರಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಜಿಲ್ಲೆಯ ಕಾಂಗ್ರೆಸ್ ವಿರೋಧಿಸಿತ್ತು. ಹಾಗೆಯೇ ವಿಮಾನ ನಿಲ್ದಾಣದಲ್ಲಿದ್ದ ಆಕೃತಿ ಸ್ಥಳಾಂತರಗೊಂಡ ಬಳಿಕ ನವೆಂಬರ್ 17 ರ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪಿಲಿನಲಿಕೆ ಆಕೃತಿಯನ್ನು ಮೂಲ ಸ್ಥಾನದಲ್ಲಿ ಮತ್ತೆ ಸ್ಥಾಪಿಸುವಂತೆ ಒತ್ತಾಯಿಸಿದ್ದರು.