ಮಂಗಳೂರು, ನ. 19 (DaijiworldNews/MB) : ಕೊರೊನಾ ಲಾಕ್ಡೌನ್ ಬಳಿಕ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜುಗಳು ಮತ್ತೆ ತೆರೆದು ಗುರುವಾರಕ್ಕೆ ಮೂರು ದಿನವಾಗಿದೆ. ಎರಡನೇ ದಿನವಾದ ಬುಧವಾರದವರೆಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಯಾವುದೇ ಗಮನಾರ್ಹ ಹೆಚ್ಚಳ ದಾಖಲಾಗಿಲ್ಲ. ಆದರೆ ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಹೆಚ್ಚಿನ ವಿದ್ಯಾರ್ಥಿಗಳು ತರಗತಿ ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಗುರುವಾರ ವಿದ್ಯಾರ್ಥಿಗಳ ಹಾಜರಾತಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ವಿದ್ಯಾರ್ಥಿಗಳು ಮನೆಯಲ್ಲಿ ಉಳಿಯಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಇನ್ನು ಕೂಡಾ ಕೊರೊನಾ ನೆಗೆಟಿವ್ ವರದಿ ಲಭಿಸದಿರುವುದು ಎಂದು ಹೇಳಲಾಗಿದೆ. ಎರಡನೆಯದು ಮನೆಯಲ್ಲಿ ಹಬ್ಬದ ವಾತಾವರಣವಿರುವುದು. ಮೂರನೆಯದಾಗಿ ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗುವ ಭಯದಿಂದ ಕಾಲೇಜುಗಳಿಗೆ ಆಗಮಿಸುತ್ತಿಲ್ಲ ಎಂದು ಹೇಳಲಾಗಿದೆ. ಇನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜುಗಳಲ್ಲಿ ಬುಧವಾರ ಹೆಚ್ಚಿನ ವಿದ್ಯಾರ್ಥಿಗಳು ಇದ್ದರು.
ಕೆಲವು ಕಾಲೇಜುಗಳಲ್ಲಿ, ಮೊದಲ ದಿನ ತರಗತಿಗಳಿಗೆ ಹಾಜರಾದ ಕೆಲವು ವಿದ್ಯಾರ್ಥಿಗಳು ಮರುದಿನ ಮತ್ತೆ ಕಾಲೇಜಿಗೆ ಬಂದಿಲ್ಲ. ಒಂದು ವಾರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಮೇಲು ಕೆಳಗೆ ಆಗಬಹುದು ಎಂದು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ.ಹರೀಶ್ ಅಭಿಪ್ರಾಯಪಟ್ಟಿದ್ದಾರೆ.
ತರಗತಿಗಳಿಗೆ ಹಾಜರಾಗಲು ನೆಗೆಟಿವ್ ಕೊರೊನಾ ವರದಿ ಕಡ್ಡಾಯವಾಗಿರುವುದರಿಂದ, ಕೆಲವು ಸರ್ಕಾರಿ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿಶೇಷ ಶಿಬಿರಗಳನ್ನು ಏರ್ಪಡಿಸಿದ್ದರು.
ಇನ್ನು ರಥಬೀದಿಯಲ್ಲಿ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಗರದ ಕೆನರಾ ಕಾಲೇಜಿನಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಲು ಸಿದ್ದವಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾಲೇಜಿನಲ್ಲಿ ಒಂದೆರಡು ದಿನಗಳಲ್ಲಿ ಶಿಬಿರವನ್ನು ಆಯೋಜಿಸುವ ಸಾಧ್ಯತೆಯಿದೆ.
ಹಾಸ್ಟೆಲ್ ಪ್ರವೇಶಕ್ಕಾಗಿ ಕೊರೊನಾ ಪರೀಕ್ಷಾ ವರದಿ: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್ಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಅನುಮತಿ ಪತ್ರ ಮತ್ತು ಕೊರೊನಾ ಪರೀಕ್ಷಾ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಸಮಾಜ ಕಲ್ಯಾಣ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಉಡುಪಿಯಲ್ಲೂ ಕಾಲೇಜು ಕ್ಯಾಂಪಸ್ಗಳು ನಿರ್ಜನವಾಗಿದ್ದವು. ಎಲ್ಲಾ ಬೋಧನಾ ಸಿಬ್ಬಂದಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿ ತರಗತಿಗಳನ್ನು ನಡೆಸಲು ಸಿದ್ಧರಾಗಿದ್ದಾರೆ. ಆದರೆ ಅನೇಕ ಪೋಷಕರು ತಮ್ಮ ಆರೋಗ್ಯವಂತ ಮಕ್ಕಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ಹಿಂಜರಿಯುತ್ತಿದ್ದಾರೆ. ಅನೇಕ ಮಂದಿ ಪರೀಕ್ಷೆಗಳು ಅನಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಎಂಜಿಎಂ ಕಾಲೇಜಿನಲ್ಲಿ, ಕಾಲೇಜಿಗೆ ಬಂದ ನಾಲ್ಕು ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗಿದೆ. ಮಂಗಳವಾರ, 319 ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರ ವರದಿ ಗುರುವಾರ ಬರುವ ನಿರೀಕ್ಷೆಯಿದೆ. ಗುರುವಾರ ಅಥವಾ ಶುಕ್ರವಾರದಂದು ಐವತ್ತು ಪ್ರತಿಶತ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ನಿರೀಕ್ಷೆಯಿದೆ.
''ಬೋಧನಾ ಸಿಬ್ಬಂದಿಗಳು ಈಗಾಗಲೇ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ'' ಎಂದು ಅಜ್ಜರಕಾಡಿನ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ತಿಳಿಸಿದರು.
''ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕ್ರಮೇಣ ಸುಧಾರಣೆಯಾಗುತ್ತದೆ'' ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಅಭಿಪ್ರಾಯಪಟ್ಟರು.
''ಆನ್ಲೈನ್ ತರಗತಿಗಳ ಆಯ್ಕೆಯ ಅವಕಾಶವಿರುವ ಕಾರಣ ಕೆಲವು ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಿದ್ದಾರೆ'' ಎಂದು ಅವರು ತಿಳಿಸಿದರು.
"ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಆದರೆ ಕುಟುಂಬದ ಎಲ್ಲ ಸದಸ್ಯರು ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ ಎಂಬ ಭಯ ಇರಬಹುದು. ಮುಂದಿನ ವಾರವಾಗುವಷ್ಟರಲ್ಲಿ ಶೇ. 50 ರಷ್ಟು ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಜರಾಗಲು ಪ್ರಾರಂಭಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.