ಸುಪ್ರೀತಾ ಸಾಲ್ಯಾನ್, ಪಡು
ಈಕೆಗೆ ಮಾತನಾಡಲು ಗೊತ್ತಿಲ್ಲ... ಕಿವಿಯೂ ಕೇಳಲ್ಲ. ಆದರೆ ಈಕೆಯಲ್ಲಿರುವ ಪ್ರತಿಭೆ ಮಾತ್ರ ಅದ್ಭುತ. ಈಕೆ ನಡೆದು ಬಂದಿರುವ ಸಾಧನೆಯ ಹಾದಿಯನ್ನು ಗಮನಿಸಿದರೆ ನೀವು ಒಮ್ಮೆ ಶಾಕ್ ಆಗುತ್ತೀರಿ. ಮಾತು ಬಾರದ, ಕಿವಿ ಕೇಳಿಸದ ಈಕೆಯನ್ನು ನೀವು ವಿಕಲಚೇತನೆ ಅಂದ್ರೆ ಅದು ಖಂಡಿತಾ ತಪ್ಪಾಗುತ್ತೆ. ಯಾಕಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಈಕೆಯಲ್ಲಿರುವ ಅಂಗವೈಕಲ್ಯ ಅಡ್ಡಿಯಾಗಿಲ್ಲ. ತನ್ನಲ್ಲಿರುವ ದೋಷವನ್ನು ಮೆಟ್ಟಿ ನಿಂತು ಇದೀಗ ಕರಾವಳಿಯ ಕಂಪನ್ನು ವಿಶ್ವ ಮಟ್ಟದಲ್ಲಿ ಪಸರಿಸುವತ್ತ ಈ ಪ್ರತಿಭೆ ಹೆಜ್ಜೆ ಹಾಕುತ್ತಿದ್ದಾಳೆ. ಅಂದ ಹಾಗೆ ಈಕೆಯ ಹೆಸರು ಯಶಸ್ವಿ ಕೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನ್ ಎಂಬಲ್ಲಿ ತಿಮ್ಮಪ್ಪ ಕೆ. ಮೂಲ್ಯ ಮತ್ತು ಯಶೋಧ ದಂಪತಿಗಳ ಪುತ್ರಿಯಾಗಿ ಜನಿಸಿದ ಈಕೆಗೆ ಹುಟ್ಟಿನಿಂದ ಕಿವಿಯೂ ಕೇಳಿಸುತ್ತಿರಲಿಲ್ಲ. ಮಾತನಾಡಲು ಆಗುತ್ತಿರಲಿಲ್ಲ. ಆದರೆ ಎಳೆಯ ವಯಸ್ಸಿನಲ್ಲಿಯೇ ಯಶಸ್ವಿ ಕೆ. ಅತೀ ಚುರುಕು ಸ್ವಭಾವದ ಹುಡುಗಿಯಾಗಿದ್ದಳು. ಮಾತ್ರವಲ್ಲ, ಬಾಲ್ಯದಲ್ಲಿಯೇ ಚದುರಂಗದಾಟದಲ್ಲಿ ಈಕೆಗೆ ಅತೀವ ಒಲವಿತ್ತು. ಈಕೆಯ ಪ್ರತಿಭೆಯನ್ನು ಗಮನಿಸಿದ ತಂದೆ-ತಾಯಿ ಮಗಳಿಗೆ ಮಾತು ಬಾರದಿದ್ದರೂ, ಕಿವಿ ಕೇಳಿಸದಿದ್ದರೂ ವಿಕಲಚೇತನ ಎಂದು ಗ್ರಹಿಸದೆ ಎಲ್ಲಾ ಮಕ್ಕಳಂತೆ ಬೆಳೆಸಿದರು. ಪರಿಣಾಮ, ಮಗಳಿಂದು ಚೆಸ್ನಲ್ಲಿ ಸಾಧನೆಯ ಶಿಖರವನ್ನೇರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಸೈ ಎನಿಸಿಕೊಳ್ಳಲಿದ್ದಾಳೆ. ಚೆಸ್ ರಂಗದಲ್ಲಿ ಸದ್ದಿಲ್ಲದೇ ಸುದ್ದಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾಳೆ.
ಕಡೇ ಶಿವಲಾಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಯಶಸ್ವಿ ಕೆ. ಕೇವಲ ಚೆಸ್ ಪ್ರತಿಭೆ ಮಾತ್ರವಲ್ಲ. ಚಿತ್ರಕಲೆ, ನೃತ್ಯ, ಭರತನಾಟ್ಯ, ಛದ್ಮವೇಷ, ಕರಕುಶಲ ಕಲೆ, ಕ್ಲೇ ಮಾಡೆಲಿಂಗ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈಕೆಯದು ಎತ್ತಿದ ಕೈ. ಕಿವಿಗೆ ಶ್ರವಣ ಸಾಧನವನ್ನು ಅಳವಡಿಸಿಕೊಂಡು ಹೇಳಿದ್ದನ್ನು ಗ್ರಹಿಸಬಲ್ಲ ಸಾಮರ್ಥ್ಯ ಈಕೆಯಲ್ಲಿದೆ. 6ನೇ ತರಗತಿಯಲ್ಲಿರುವಾಗ ಜೀನಿಯಸ್ ಚೆಸ್ ಸ್ಕೂಲ್ನಲ್ಲಿ ಗುರುಗಳಾದ ಸತ್ಯ ಪ್ರಸಾದ್ ಕೋಟೆ ಮತ್ತು ಆಶಾ ಕಾವೇರಿ ದಂಪತಿಗಳ ಗರಡಿಯಲ್ಲಿ ಚದುರಂಗದಾಟವನ್ನು ಕರಗತಮಾಡಿಕೊಂಡ ಯಶಸ್ವಿ ಕೆ ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚೆಸ್ ಆಟಗಾರ್ತಿ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿಯೇ ಚೆಸ್ ಆಟವಾಡುತ್ತಾ ಬೆಳೆದು ಬಂದ ಈಕೆ ಇದೀಗ ತನ್ನ 15ನೇ ವರ್ಷ ವಯಸ್ಸಿನಲ್ಲಿ ಇತರ ಚೆಸ್ ಆಟಗಾರರಿಗೆ ಸವಾಲಾಗಿ ನಿಂತಿದ್ದಾಳೆ.
ನೃತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಈಕೆ ನೃತ್ಯದ ಬೇರೆ ಬೇರೆ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ. ಗುರುಗಳಾದ ದೀಪಕ್ ಕುಮಾರ್ ಅವರ ಗರಡಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಯಶಸ್ವಿ, ಜ್ಯೂನಿಯರ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ್ದಾಳೆ. ಇದೀಗ ನೃತ್ಯ ವಿಧುಷಿ ಶಾಲಿನಿ ಆತ್ಮಭೂಷಣ್ ಅವರಲ್ಲಿ ಹೆಚ್ಚಿನ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದಾಳೆ.
ವಿಡಿಯೋಗೇಮ್, ಕಂಪ್ಯೂಟರ್ ಮುಂದೆ ಕೂತು ಆಟವಾಡಬೇಕಿದ್ದ ಎಳೆಯ ವಯಸ್ಸಿಲ್ಲಿ ಯಶಸ್ವಿಯ ಕಣ್ಣಿಗೆ ಬಿದ್ದದ್ದು ಚದುರಂಗದ ಬಿಲ್ಲೆಗಳು. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಸಾಮಾನ್ಯ ಮಕ್ಕಳ ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಗೆಲುವಿನ ನಗೆ ಬೀರಿದ್ದಳು. 8ನೇ ತರಗತಿಯಲ್ಲಿರುವಾಗ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೊದಲ ಬಾರಿ ಪ್ರತಿನಿಧಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿದ್ದಳು. ಹೀಗೆ ಆರಂಭವಾದ ಚೆಸ್ ಜರ್ನಿಯಲ್ಲಿ ಮುಂದೆ ಸಾಗಿದ ಯಶಸ್ವಿ ಇವತ್ತು ಸೋಲರಿಯದ ಚದುರಂಗದ ಆಟಗಾರ್ತಿಯಾಗಿದ್ದಾಳೆ.
2017ರ ನವೆಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ. ಇದೀಗ ಚೆಸ್ ರಂಗದಲ್ಲಿ ಇತರ ಚೆಸ್ ಪಟುಗಳಿಗೆ ಮಾದರಿಯಾಗಿ ನಿಂತಿರುವ ಯಶಸ್ವಿ.ಕೆ ಚದುರಂಗದಾಟದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಇಂಗ್ಲೇಡ್ನತ್ತ ಹೆಜ್ಜೆ ಇಟ್ಟಿದ್ದಾಳೆ. ಮುಂದಿನ ಜುಲೈ ತಿಂಗಳಿನಲ್ಲಿ 6-16ರವರೆಗೆ ಇಂಗ್ಲೇಂಡ್ನ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾಳೆ.
ಚೆಸ್ ರಂಗದಲ್ಲಿ ಸದ್ದಿಲ್ಲದೇ ಸುದ್ದಿ ಮಾಡಿರುವ ಯಶಸ್ವಿ ಕೆ. ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾಳೆ. ಚೆಸ್ನಲ್ಲಿ ಅಗಮ್ಯ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಚದುರಂಗದಾಟದಲ್ಲಿ ಅಧಿಪತ್ಯ ಸ್ಥಾಪಿಸಲಿ ಎಂದು ಹಾರೈಸೋಣ.