ಉಳ್ಳಾಲ, ನ. 19 (DaijiworldNews/SM): ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂ ಪಾಕಿಸ್ತಾನ ಏಜೆಂಟರಾಗಿರುವ ಕಲ್ಲಡ್ಕ ಭಟ್ ವಿರುದ್ಧ ಎಫ್ ಐಆರ್ ದಾಖಲಿಸುವುದು ಖಚಿತ. ದಾವೆಗೆ ಎಷ್ಟು ಖರ್ಚಾದರೂ ಉಳ್ಳಾಲದ ಜನ ಸಿದ್ಧರಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.




ಅವರು ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂದು ಹೇಳಿ ಅವಮಾನಗೊಳಿಸಿದ ದೇಶವಿರೋಧಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಗುರುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಕಲಿ ಜಾತ್ಯಾತೀತ ಮುಖವಾಡದವರ ಪ್ರೋತ್ಸಾಹದಿಂದ ಕಲ್ಲಡ್ಕ ಭಟ್ ನಿರಂತರವಾಗಿ ಅಶಾಂತಿ ಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ. ಉಳ್ಳಾಲ ಪಾಕಿಸ್ತಾನ ಎಂದ ಭಟ್ ವಿರುದ್ಧವೇ ಸ್ವಕ್ಷೇತ್ರದ ಶಾಸಕರಿಗೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡಲು ಅಸಾಧ್ಯವಾಗಿದೆ. ಜಾತ್ಯಾತೀತ ಮುಖವಾಡ ತೋರಿಸಿಕೊಂಡು ಕೋಮುವಾದವನ್ನು ಶಾಸಕರು ವಿರೋಧಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಬಾಬರಿ ಮಸೀದಿ, ಎನ್ ಆರ್ ಸಿ, ಸಿಎಎ ಪರವಾಗಿ ಮಾತನಾಡಿದರೆ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ. ಆದರೆ ಪಾಕಿಸ್ತಾನದ ಏಜೆಂಟ್ ಆಗಿರುವ ಕಲ್ಲಡ್ಕ ಭಟ್ಗೆ ಮತ್ತು ಪೊಲೀಸ್ ಇಲಾಖೆಗೆ ಸಂಬಂಧ ಇದ್ದಂತೆ ಕಾಣುತ್ತಿದೆ. ಸಂಘಪರಿವಾರದ ಗರಡಿಯಲ್ಲಿ ಬೆಳೆದ ಪ್ರಧಾನಿಯೇ ಪಾಕಿಸ್ತಾನದ ಬಿರಿಯಾನಿ ತಿಂದವರು. ಅವರಿಗೆ ಬುದ್ಧಿ ಹೇಳುವ ನೈತಿಕತೆ ಕಲ್ಲಡ್ಕ ಭಟ್ ಗಿಲ್ಲ. ಉಳ್ಳಾಲದಲ್ಲಿ ಪಂಚವಾರ್ಷಿಕವಾಗಿ ಆಚರಿಸುವ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿ ಧರ್ಮದವರು ಭಾಗವಹಿಸಿ ಸೌಹಾರ್ದತೆಗೆ ಸಾಕ್ಷಿಯಾಗುತ್ತಾರೆ. ಪ್ರತಿ ಧರ್ಮದವರನ್ನು ವೇದಿಕೆಯಲ್ಲಿ ಕೂರಿಸಿ ಗೌರವ ನೀಡಲಾಗುತ್ತಿದೆ. ಅಂತಹ ಸಾಮರಸ್ಯವಿರುವ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಎಸ್ ಡಿಪಿಐ ಮನಸ್ಸು ಮಾಡಿದರೆ ಉಳ್ಳಾಲದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ,ದಲಿತ ನನ್ನು ಕೂಡಾ ಶಾಸಕನಾಗಿ ಮಾಡಿ ತೋರಿಸುತ್ತದೆ ಎಂದು ಕಲ್ಲಡ್ಕ ಮಾತಿಗೆ ಪ್ರತಿಸವಾಲು ಹಾಕಿದರು.
ಪೊಲೀಸರು ದ್ವಿಮುಖ ಧೋರಣೆ ತೋರಿಸದೆ, ಭಟ್ ವಿರುದ್ಧ ಕೂಡಲೇ ಎಫ್ ಐ ಅರ್ ದಾಖಲಿಸಬೇಕು. ದಾಖಲಿಸದೇ ಇದ್ದಲ್ಲಿ ಎಸ್ ಡಿಪಿಐ ಪಕ್ಷ ಕಾಂಗ್ರೆಸ್ -ಜೆಡಿಎಸ್ ಪಕ್ಷದಂತೆ ಸುಮ್ಮನಿರುವುದಿಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆಯನ್ನು ಬಿಟ್ಟು ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿರುವುದು ಪೊಲೀಸರಿಗೆ ಶರಣಾಗತಿಯಲ್ಲ. ಬದಲಾಗಿ ಪ್ರಜಾಪ್ರಭುತ್ವದ ಸೌಂದರ್ಯ ಕಾಪಾಡುವ ಉದ್ದೇಶದೊಂದಿಗೆ ನಡೆಸಿದ್ದೇವೆ. ಎರಡನೇ ಹಂತದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸನ್ನಿವೇಶ ಕಲ್ಪಿಸಿದಲ್ಲಿ ಠಾಣೆಯ ಎದುರುಗಡೆ, ಮಂಗಳೂರು ಕಮೀಷನರ್ ಕಚೇರಿ ಎದುರುಗಡೆಯೂ ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದರು.