ಜೂ 05:ಗ್ವಾಟೆಮಾಲಾದಲ್ಲಿ ಸ್ಫೋಟಗೊಂಡಿರುವ ಫ್ಯೂಗೋ ಜ್ವಾಲಾಮುಖಿ ಇದಕ್ಕಿದ್ದಂತೆ ಬೆಂಕಿ ಉಗುಳಲು ಆರಂಭಿಸಿದ್ದು, ಈ ಭಯಾನಕ ಅಗ್ನಿಯ ಜ್ವಾಲೆಗೆ ಇಲ್ಲಿಯವರೆಗೆ 70 ಮಂದಿ ಬಲಿಯಾಗಿದ್ದಾರೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಜ್ವಾಲಮುಖಿಯ ಭೀಕರತೆಗೆ ಕ್ಷಣ ಮಾತ್ರದಲ್ಲಿ ಸುತ್ತಮುತ್ತಲಿದ್ದ ಜನ ಬಿಸಿ ಬೂದಿ ಹಾಗೂ ಮಣ್ಣಿನೊಳಗೆ ಜೀವಂತ ಸಮಾಧಿಯಾಗಿ ಹೋಗಿದ್ದಾರೆ. ಅಲ್ಲಿನ ಮರಗಿಡ, ವಾಹನ ಮತ್ತು ರಸ್ತೆಗಳು ಬೂದು ಬಣ್ಣಕ್ಕೆ ತಿರುಗಿದ್ದು , ಬೃಹತ್ ಗಾತ್ರದ ಬಂಡೆಗಲ್ಲುಗಳು ಉರುಳಿ ಬಿದ್ದಿವೆ.
ಗ್ವಾಟೆಮಾಲಾ ಸಿಟಿಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು, ಕಣ್ಮರೆಯಾದವರಿಗಾಗಿ ಮತ್ತು ಸಂಕಷ್ಟದಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಪಡೆಯು ಶೋಧ ಕಾರ್ಯ ನಡೆಸುತ್ತಿದ್ದು, ಕಾರ್ಯಚರಣೆ ಬರದಿಂದ ಸಾಗಿದೆ. ಜ್ವಾಲಾಮುಖಿ ಸ್ಫೋಟದ ನಂತರ ನಾಪತ್ತೆಯಾದವರ ಸಂಖ್ಯೆ ಇನ್ನೂ ಅಸ್ಪಷ್ಟವಾಗಿದೆ . ಜ್ವಾಲಾಮುಖಿಯಿಂದ ಹೊರ ಬರುತ್ತಿರುವ ಲಾವಾರಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದವರು ಅದರ ಅಡಿ ಸಿಲುಕಿ ಸಾವನಪ್ಪಿದ್ದಾರೆ.
ಮೊಣಕಾಲೆತ್ತರದ ಬೂದಿಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದಾರೆ. ಜ್ವಾಲಾಮುಖಿ ಅಗ್ನಿ ಪರ್ವತದ ದಕ್ಷಿಣ ಭಾಗವನ್ನು ತಲುಪಲು ರಕ್ಷಣಾ ಪಡೆಗೆ ಸಾಧ್ಯವಾಗುತ್ತಿಲ್ಲ. ಮೃತರ ಸಂಖ್ಯೆ 100ರ ಗಡಿ ದಾಟಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಭೀಕರ ಹಾಗೂ ಭಯಾನಕ ಜ್ವಾಲಾಮುಖಿಯಿಂದಾಗಿ ಸಾವಿರಾರು ಜನರು ತಾತ್ಕಾಲಿಕ ಶೆಡ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಫ್ಯೂಗೋ ಜ್ವಾಲಾಮುಖಿಯ ಬೂದಿ ಅಂದಾಜು 10 ಕಿಲೋ ಮೀಟರ್ ವರೆಗೆ ಹರಡಿದೆ ಎಂದು ವರದಿ ವಿವರಿಸಿದೆ.