ಮಂಗಳೂರು, ನ.20 (DaijiworldNews/HR): ಖ್ಯಾತ ಕೊಂಕಣಿ ಬರಹಗಾರ ಮತ್ತು ಬೋಧಕ ಫಾ. ವಿ ಜೆ ಮಿನೇಜಸ್ ಅವರು ಶುಕ್ರವಾರ ನಿಧನರಾಗಿದ್ದಾರೆ.

ಫಾ. ವಿ ಜೆ ಮಿನೇಜಸ್ ಕೊಂಕಣಿ ಸಾಹಿತ್ಯ ಜಗತ್ತಿನಲ್ಲಿಯೂ ಕೆಲವು ಪ್ರಮುಖ ಸಾಧನೆಗಳನ್ನು ಮಾಡಿದ್ದು, 'ನೊಯೆಲ್ಲಾ' ಮತ್ತು 'ತುಜಾ ಆಲ್ಬಮೇಕರ್ ಮೊಜಿ ತಸ್ವೀರ್' ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. 'ಜಿನ್ಯೆಂಥಲ್ ಅನ್ಬಾಗ್' ಮತ್ತು 'ಹೆವ್ಶಿಲಿ ಆನಿ ತೆವ್ಶಿಲಿ ಕೂಸ್' ಎಂಬ ಎರಡು ಪುಸ್ತಕಗಳು ಸ್ವಯಂ ಅನುಭವ ಮತ್ತು ಆಧ್ಯಾತ್ಮಿಕ ಮತ್ತು ಸಾರ್ವಜನಿಕ ಜೀವನದ ಪಾಠಗಳನ್ನು ಆಧರಿಸಿ ಬರೆದಿದ್ದಾರೆ.
ಫಾ. ವಿ ಜೆ ಮಿನೇಜಸ್ 1940 ರಲ್ಲಿ ಮೂಡುಬಿದಿರೆ ಬಳಿಯ ಹೊಸಬೆಟ್ಟುವಿನಲ್ಲಿ ಜನಿಸಿದರು. ಕೃಷಿಕರಾಗಿದ್ದ ಲೂವಿಸ್ ಮಿನೇಜಸ್ ಮತ್ತು ಸೆಬೆಸ್ಟಿಯಾನ ಅವರ ಎರಡನೆಯ ಮಗನಾಗಿ ಜನಿಸಿದ ಫಾ. ವಿ ಜೆ ಮಿನೇಜಸ್ ಸೇಂಟ್ ಸೆಬಾಸ್ಟಿಯನ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು.
ಕ್ಯಾಪುಚಿನ್ ಅವರು ಮಿನೇಜಸ್ ಅವರನ್ನು ಸೈಂಟ್ ಅಲೋಶಿಯಸ್ ಪ್ರೌಢ ಶಾಲೆಗೆ ಸೇರಿಸಿದ್ದರು. ಎಸ್ಎಸ್ಎಲ್ಸಿ ನಂತರ, ಲ್ಯಾಟಿನ್ ಭಾಷೆಯನ್ನು ಕಲಿಯಲು ಕೊಯಮತ್ತೂರು ಸೆಮಿನರಿಗೆ ಹೋಗಿ ಮತ್ತೆ ಮಂಗಳೂರಿಗೆ ಬಂದು ಫರಂಗಿಪೇಟೆಯಲ್ಲಿ ತಮ್ಮ ಗುರು ತರಬೇತಿ ಪೂರ್ಣಗೊಳಿಸಿದರು. ನಂತರ ಅವರು ತ್ರಿಶೂರ್ನಲ್ಲಿ ತತ್ವಶಾಸ್ತ್ರ ಮತ್ತು ತಮಿಳುನಾಡಿನ ಕೋಟೆಗಿರಿಯಲ್ಲಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು. 1968 ರಲ್ಲಿ ಅಕ್ಟೋಬರ್ 6 ರಂದು, ಹೊಸಬೆಟ್ಟು ಚರ್ಚ್ನಲ್ಲಿ ಕ್ಯಾಪುಚಿನ್ ಪಾದ್ರಿಯಾಗಿ ನೇಮಕಗೊಂಡರು.
ದೀಕ್ಷೆ ಪಡೆದ ನಂತರ ಫಾ. ವಿ ಜೆ ಮಿನೇಜಸ್ ಅವರನ್ನು ಪತ್ರಿಕೋದ್ಯಮ ಕೋರ್ಸ್ಗಾಗಿ ಮುಂಬೈನ ಚೌಪತಿಯ ಭವನ ಕಾಲೇಜಿಗೆ ಕಳುಹಿಸಲಾಯಿತು. ನಂತರ ಅವರನ್ನು ಮಂಗಳೂರಿನ ಕ್ಯಾಪುಚಿನ್ ಫಾದರ್ಸ್ ಪ್ರಕಟಣೆಯ 'ಸೇವಕ್' ಮಾಸಿಕದ ಸಂಪಾದಕರಾಗಿ ನೇಮಿಸಲಾಯಿತು. 'ಸೇವಕ್' ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, 'ಫ್ರಾನ್ಸಿಸ್ಕನ್ ಆಧ್ಯಾತ್ಮಿಕತೆ' ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೇರಿಕಾಕ್ಕೆ ಹೋದರು. ಭಾರತಕ್ಕೆ ಮರಳಿದ ನಂತರ,ಫಾ. ವಿ ಜೆ ಮಿನೇಜಸ್ ಅವರು ಪೂರ್ಣ ಸಮಯದ ಬೋಧಕರಾದರು.
ಅವರು ಮೂರು ವಿಭಿನ್ನ ರಾಜ್ಯಗಳಲ್ಲಿ ಸೆಮಿನರಿ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಇಂಗ್ಲಿಷ್, ಲ್ಯಾಟಿನ್, ಕನ್ನಡ ಮತ್ತು ಹಿಂದಿಯಲ್ಲದೆ, ಅವರು ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ನಿರರ್ಗಳರಾಗಿದ್ದರು. ಇದು ಅವರ ಬೋಧನಾ ವೃತ್ತಿಜೀವನದಲ್ಲಿ ಅವರಿಗೆ ಸಾಕಷ್ಟು ಸಹಾಯ ಮಾಡಿತು. ಅಮೇರಿಕಾದಲ್ಲಿ 'ಫ್ರಾನ್ಸಿಸ್ಕನ್ ಆಧ್ಯಾತ್ಮಿಕತೆ' ಕುರಿತ ಅಧ್ಯಯನಕ್ಕೆ ಪ್ರವೇಶ ಪಡೆದ ಮೊದಲ ಭಾರತೀಯ ಇವರು. ಈ ಅಧ್ಯಯನವು ಅವರನ್ನು ಭಾರತದಲ್ಲಿ ಜನಪ್ರಿಯಗೊಳಿಸುವುದ ಜೊತೆಗೆ ಕಾನ್ವೆಂಟ್ಗಳು ಕೂಡ ಆಧ್ಯಾತ್ಮಿಕತೆಯ ಕುರಿತು ಬೋಧಿಸಲು ಅವರನ್ನು ಆಹ್ವಾನಿಸಿದರು.