ಮಂಗಳೂರು, ಜೂ 06: ಮೇ 29 ರಂದು ಸುರಿದ ಮಹಾ ಮಳೆಗೆ ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಗೆ ಸೇರಿದ ರನ್ ವೇ ಹೊರಭಾಗದ ಬೃಹತ್ ತಡೆಗೋಡೆ ಬಿರುಕುಬಿಟ್ಟಿದ್ದು. ಇದು ಕೆಳಭಾಗದಲ್ಲಿ ವಾಸಿಸುವ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ತಡೆಗೋಡೆ ಬಿರುಕು ಬಿಟ್ಟಿರುವುದರಿಂದ ರನ್ ವೇಗೆ ಅಥವಾ ವಿಮಾನ ಹಾರಾಟಕ್ಕೆ ತೊಂದರೆ ಇಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸರಕು ಸಾಗಣೆ ವಿಮಾನಗಳು, ದೇಶದೊಳಗೆ ಹಾರಾಟ ನಡೆಸುವ ವಿಮಾನಗಳು ಇಳಿಯುವುದು ಮತ್ತು ಹಾರಾಟ ಆರಂಭಿಸುವುದಕ್ಕೆ ವಿಮಾನ ನಿಲ್ದಾಣದ ಹಳೆಯ ರನ್ ವೇ ಯನ್ನು ಬಳಸಲಾಗುತ್ತದೆ. ಈ ರನ್ ವೇ ಮೇಲ್ಬಾಗದಲ್ಲಿ ಕಾಂಪೌಂಡ್ ಗೆ ಹಾನಿಯಾಗಿದೆ. ತಡೆಗೋಡೆಗೆ ಹೊಂದಿಕೊಂಡಂತೆ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿದುಬಿದ್ದಿದೆ. ಅಲ್ಲದೆ ಇಲ್ಲಿ ಭೂ ಕುಸಿತ ಮುಂದುವರಿದಿದೆ. ಮೇ ೨೯ ರಂದು ವಿಮಾನ ನಿಲ್ದಾನದ ಅವರಣದಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ನೀರು ಏಕಾಏಕಿ ಹೊರಕ್ಕೆ ಹರಿದಿದ್ದರಿಂದ ಮಣ್ಣು ಕೊಚ್ಚಿಕೊಂಡು ಕೊಂಡು ಹೋಗಿದೆ. ಹೀಗಾಗಿ ಇದರ ಕೆಳಗಿನ ಪ್ರದೇಶವಾದ ಕಂದಾವರ ಗ್ರಾಮದ ವಿಟ್ಲಬೆಟ್ಟು ಊರಿನ ೮ ಮನೆಗಳಿಗೆ ಹಾನಿಯಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ ರಾವ್ , ಬಿರುಕಿನಿಂದ ರನ್ ವೇಗೆ ಅಪಾಯವಿಲ್ಲ ಈ ಗೋಡೆಯೂ ರನ್ ವೇ ಯಿಂದ ಬಹಳದೂರದಲ್ಲ್ಲಿದೆ ಮಳೆಯ ಪರಿನಾಮ ಊಹಿಸಲಾಗದಷ್ಟು ತಡೆಗೋಡೆಗೆ ಹಾನಿಯಾಗಿದ್ದು ಈಗಾಗಲೇ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಗೋಡೆ ಕುಸಿಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ದುರಸ್ತಿ ಕೆಲಸ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.