ಉಡುಪಿ, ನ.20 (DaijiworldNews/PY): "2019-2020 ನೇ ಹಣಕಾಸು ವರ್ಷದ ಬಜೆಟ್ನಲ್ಲಿ 200. ರೂ.ಮೀಸಲಿರಿಸಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮವು ಇನ್ನೇನು ಉದ್ಘಾಟನೆ ಆಗಬೇಕು ಎನ್ನುವಷ್ಟರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದರ ಸ್ಥಾಪನೆಯ ಪ್ರಸ್ತಾಪವನ್ನು ರದ್ದುಗೊಳಿಸಲು ಟಿಪ್ಪಣಿ ಬರೆದಿದ್ದಾರೆ. ಇದರಿಂದ ರಾಜ್ಯದ ಕ್ರೈಸ್ತ ಸಮುದಾಯದ ಕನಸುಗಳು ನುಚ್ಚುನೂರಾಗಿವೆ. ಆದರೆ ಇದನ್ನು ನಂಬಿಕೊಂಡ ಹಲವಾರು ಅಲ್ಪಸಂಖ್ಯಾತ ಬಡ ಕುಟುಂಬಗಳಿಗೆ ಸಮಸ್ಯೆ ಉಂಟಾಗುತ್ತವೆ. ಏಕಾಏಕಿ ಈ ನಿಗಮದ ರದ್ಧತಿಗೆ ಒತ್ತಾಯ ಪಡಿಸಿದ್ದು ಯಾರು ಎಂದು ಮುಖ್ಯಮಂತ್ರಿಯವರು ತಿಳಿಸಬೇಕು. ಕೂಡಲೇ ನಿಗಮವನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಬೇಕು" ಎಂದು ಕ್ರಿಶ್ಚನ್ ಪೋರಂ ಫಾರ್ ಹ್ಯೂಮನ್ ರೈಟ್ಸ್, ಉಡುಪಿಯ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಸರಕಾರವನ್ನು ಒತ್ತಾಯಿಸಿದರು.



ಶುಕ್ರವಾರ ಉಡುಪಿಯ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, "ರಾಜ್ಯ ಸರಕಾರವು ರಾಜ್ಯದಲ್ಲಿನ ಸಣ್ಣ ಪುಟ್ಟ ಸಮುದಾಯಗಳಿಗೂ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿರುವಾಗ ಹಲವಾರು ಲಕ್ಷ ಮಿಕ್ಕಿ ಜನಸಂಖ್ಯೆಯಿರುವ ಕ್ರೈಸ್ತ ಸಮುದಾಯ ರಾಜ್ಯದಾದ್ಯಂತ ಹರಡಿದ್ದು ಶಿಕ್ಷಣ, ಸಮಾಜ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಜೊತೆಗೂಡಿ ಶ್ರಮಿಸುತ್ತಿರುವಾಗ, ನಮ್ಮ ಸಮುದಾಯವನ್ನು ಕಡೆಗಣಿಸಿದ್ದು, ರಾಜ್ಯದ ಕ್ರೈಸ್ತರಿಗೆ ಅತೀವ ನಿರಾಸೆಯುಂಟುಮಾಡಿದೆ. ಇದು ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವ ರಾಜ್ಯದ ಕ್ರೈಸ್ತರಿಗೆ ನೋವನ್ನುಂಟುಮಾಡಿದೆ. ಈ ಮೂಲಕ ರಾಜ್ಯದಾದ್ಯಂತ ಇರುವ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಬಹಳಷ್ಟು ಬಡ ಕ್ರೈಸ್ತರು ಸರ್ಕಾರದ ಯೋಜನೆಗಳನ್ನು ಅವಲಂಬಿಸಿದ್ದಾರೆ" ಎಂದರು.
"ಪ್ರಸ್ತಾಪಿತ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಈವರೆಗೆ ಕ್ರೈಸ್ತರಿಗೆ ದೊರಕುತ್ತಿದ್ದ ಸವಲತ್ತುಗಳೊಂದಿಗೆ ಅಲ್ಪ ಸಂಖ್ಯಾತ ಇಲಾಖೆಯಿಂದ ನ್ಯಾಯಯುತವಾಗಿ ದೊರಕಬೇಕಿದ್ದ ಸೌಲಭ್ಯಗಳನ್ನೂ ಕೂಡಾ ಈ ನಿಗಮದ ಅಡಿಯಲ್ಲಿ ಸಿಗುವಂತೆ ಮಾಡಿ, ರಾಜ್ಯದ ಕ್ರೈಸ್ತರು ಗೌರವಯುತ ಜೀವನವನ್ನು ನಡೆಸಲು ಅನುವು ಮಾಡಿಕೊಡಬೇಕು" ಎಂದು ತಿಳಿಸಿದರು.
"2012ರಲ್ಲಿ ಸ್ವತಃ ಯಡಿಯೂರಪ್ಪ ಅವರೇ 50 ಕೋಟಿ. ರೂ ಮೀಸಲಿರಿಸಿ ಕ್ರಿಶ್ಚಿಯನ್ ಅಭಿವೃದ್ಧಿ ಕಮಿಟಿಯನ್ನು ಸ್ಥಾಪಿಸಿತ್ತು. 2020ರ ನಿಗಮ ಸ್ಥಾಪನೆ ಪ್ರಸ್ತಾಪ ಎಲ್ಲರಿಗೂ ಸಂತೋಷ ಕೊಟ್ಟಿತ್ತು. ಆದರೆ ಯಾರದೋ ಒತ್ತಾಯಕ್ಕೆ ಮಣಿದು ನಿಗಮದ ರದ್ದತಿಗೆ ರಾಜ್ಯ ಸರ್ಕಾರ ಮುಂದಾಗಿರುವುದು ಬಹಳ ನೋವು ತಂದಿದೆ. ಹಾಗಾಗಿ ಕೂಡಲೇ ಮುಖ್ಯಮಂತ್ರಿ ನಿರ್ಧಾರವನ್ನು ಕೈಬಿಡಬೇಕು" ಎಂದು ಪ್ರಶಾಂತ್ ಆಗ್ರಹಿಸಿದರು.
"ಮುಂದೆ ಕ್ರೈಸ್ತ ಒಕ್ಕೂಟದ ನಾಯಕರು ಮುಖ್ಯ ಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ" ಎಂದರು.
ಕಥೋಲಿಕ್ ಸಭಾ, ಉಡುಪಿ ಪ್ರದೇಶದ ಅಧ್ಯಕ್ಷ ರಾಬರ್ಟ್ ಮಿನೇಜಸ್, ಕರ್ನಾಟಕ ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ನೇರಿ ಕರ್ನೆಲಿಯೋ, ತೋಮಸ್ ಸುವಾರಿಸ್ ಟ್ರಸ್ಟಿ ಸೈಂಟ್ ಮೇರಿಸ್ ಒರ್ಥೋಡೊಕ್ಸ್ ಸಿರಿಯನ್ ಕ್ಯಾಥಡ್ರಲ್ ಉಡುಪಿ, ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ಯಾಥೊಲಿಕ್ ಸಭಾ, ಉಡುಪಿ, ಲೂವಿಸ್ ಲೋಬೋ, ಅಲೆನ್ ವ್ಹಾಜ್, ಕಾರ್ಯದರ್ಶಿ, ಸೈಂಟ್ ಮೇರಿಸ್ ಒರ್ಥೋಡೊಕ್ಸ್ ಸಿರಿಯನ್ ಕ್ಯಾಥಡ್ರಲ್ ಮುಂತಾದವರು ಉಪಸ್ಥಿತರಿದ್ದರು.