ಉಪ್ಪಿನಂಗಡಿ, ನ.20 (DaijiworldNews/PY): "ಸಾರ್ವಜನಿಕ ಸೇವೆಯನ್ನು ನಿಭಾಯಿಸುವ ಸಂದರ್ಭ, ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯ ಸಾಧನೆಯಿಂದ ಸಾರ್ವಜನಿಕ ವಲಯದಲ್ಲಿ ಪೊಲೀಸರು ಗುರುತಿಸುವಂತಾಗಬೇಕು. ಹೀಗಾದಲ್ಲಿ ಮಾತ್ರ ಸಾರ್ವಜನಿಕರ ಹಾಗೂ ಇಲಾಖೆಯ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಸಾಧ್ಯ" ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಹೇಳಿದ್ದಾರೆ.

ಇತ್ತೀಚೆಗೆ ಪೆರ್ನೆಯ ಬಿಳಿಯೂರಿನಲ್ಲಿ ನಡೆದ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಪೆರ್ನೆ ನಾಗರಿಕರ ಪರವಾಗಿ ಶನಿವಾರ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದರು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಮಾತನಾಡಿ, "ಯಾವುದೇ ಪ್ರಕರಣಗಳು ನಡೆದ ಸಂದರ್ಭ ಸ್ಥಳೀಯರು ಪೊಲೀಸರಿಗೆ ಸಹಕರಿಸಬೇಕು. ಅಲ್ಲದೇ, ತಾಳ್ಮೆಯಿಂದ ವರ್ತಿಸಬೇಕು. ಇದು ಮುಖ್ಯ. ಸಂಶಯಾಸ್ಪದ ವ್ಯಕ್ತಿಗಳು ಕಂಡ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ತಿಳಿಸಬೇಕು" ಎಂದು ತಿಳಿಸಿದ್ದಾರೆ.
ಧನ್ಯ ಕುಮಾರ್ ರೈ ಮಾತನಾಡಿ, "ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಹೆಚ್ಚಿನ ಯಾವುದೇ ಸಾಕ್ಷ್ಯಧಾರಗಳು ಇರಲಿಲ್ಲ. ಆದರೂ, ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಈ ಕಾರ್ಯ ಅಭಿನಂದನಾರ್ಹ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಸ್ಥನಾದ ಆಡಳಿತ ಮೊಕ್ತೇಸರ ರೋಹಿತಾಕ್ಷ, ಪೆರ್ನೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಪುಷ್ಪರಾಜ್ ಶೆಟ್ಟಿ, ಗ್ರಾ.ಪಂ.ನ ಮಾಜಿ ಸದಸ್ಯರಾದ ಶಿವಪ್ಪ ನಾಯ್ಕ, ವೆಂಕಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.