ಮಂಗಳೂರು, ನ. 20 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು 80 ತಾತ್ಕಾಲಿಕ ಪರವಾನಿಗೆಗಳನ್ನು ವಿತರಿಸಲಾಗಿದೆ. ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಣಿಕಾ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕಾಗಿರುತ್ತದೆ.

ತಾತ್ಕಾಲಿಕ ಪರವಾನಿಗೆದಾರರು ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ, ವಾಹನ ಮಾಲೀಕರು ಮತ್ತು ತಾತ್ಕಾಲಿಕ ಪರವಾನಿಗೆದಾರರು ಮರಳು ಸಾಗಾಣಿಕಾ ವಾಹನಗಳಿಗೆ ಕಿಯೋನಿಕ್ಸ್ ನಿಗದಿಪಡಿಸಿದ ಸಂಸ್ಥೆಯಿಂದ ಜಿ.ಪಿ.ಎಸ್. ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕೆಂದು ಆದೇಶಿಸಲಾಗಿದೆ. ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಜಿ.ಪಿ.ಎಸ್. ಅಳವಡಿಸಿದ ಬಗ್ಗೆ ದಾಖಲೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಬೇಕಾಗಿದೆ.
ಸ್ಯಾಂಡ್ ಬಜಾರ್ ಆಪ್ ಮತ್ತೆ ಆಕ್ಟಿವ್:
ಇನ್ನು ಮರಳು ದಿಬ್ಬಗಳನ್ನು ತೆರವುಗೊಳಿಸಿ ‘ಸ್ಯಾಂಡ್ ಬಜಾರ್ ಆಪ್’ ಮೂಲಕವೇ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮರಳನ್ನು ಪೂರೈಸಬೇಕಾಗಿರುತ್ತದೆ. ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ‘ಸ್ಯಾಂಡ್ ಬಜಾರ್ಆಪ್’ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಮರಳು ಪೂರೈಕೆಗಾಗಿ ‘ಸ್ಯಾಂಡ್ ಬಜಾರ್ ಆಪ್’ ಅನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ಅನಾವರಣಗೊಳಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಲಾಗಿದೆ.