ಕಾಸರಗೋಡು, ನ.21 (DaijiworldNews/PY): ಡಿ.14ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಲ್ಲಿಸಲಾಗಿದ್ದ 71 ನಾಮಪತ್ರ ತಿರಸ್ಕೃತಗೊಂಡಿದೆ.

ಸಾಂದರ್ಭಿಕ ಚಿತ್ರ
5,390 ನಾಮಪತ್ರಗಳಲ್ಲಿ 5,318 ನಾಮಪತ್ರ ಗಳು ಸ್ವೀಕೃತಗೊಂಡಿವೆ. ಒಂದು ನಾಮಪತ್ರ ಪರಿಶೀಲನೆ ಅಂತಿಮಗೊಳಿಸಿಲ್ಲ. ನೀಲೇಶ್ವರ ನಗರಸಭೆಯ ಒಂದು ನಾಮಪತ್ರ ಗೊಂದಲದ ಹಿನ್ನಲೆಯಲ್ಲಿ ತಾತ್ಕಾಲಿಕ ತಡೆ ನೀಡಲಾಗಿದೆ.
ಶುಕ್ರವಾರ ಬೆಳಿಗ್ಗೆ ಆರಂಭಗೊಂಡ ಸೂಕ್ಷ್ಮ ಪರಿಶೀಲನೆ ರಾತ್ರಿ ತನಕ ನಡೆದವು. ಜಿಲ್ಲಾ ಪಂಚಾಯತ್ನ 17 ವಾರ್ಡ್ಗಳಿಗೆ ಸಲ್ಲಿಸಲಾಗಿದ್ದ ಆರು ನಾಮಪತ್ರ ತಿರಸ್ಕೃತಗೊಂಡಿದ್ದು, 94 ಮಂದಿ ಕಣದಲ್ಲಿದ್ದಾರೆ.
ಮಂಜೇಶ್ವರ ವಾರ್ಡ್ನಲ್ಲಿ ದಾಮೋದರ ಎ.(ಸ್ವತಂತ್ರ), ಅಹಮ್ಮದ್ ಜಲಾಲುದ್ದೀನ್(ಎ.ಎ.ಪಿ.), ಉದುಮದಲ್ಲಿ ಕೆ.ಸುಕುಮಾರಿ(ಕಾಂಗ್ರೆಸ್), ಚೆರುವತ್ತೂರಿನಲ್ಲಿ ಕೆ. ಭರತನ್(ಸ್ವತಂತ್ರ), ಚಿತ್ತಾರಿಕಲ್ನಲ್ಲಿ ಜಿಂಟೋ(ಸ್ವತಂತ್ರ), ಕುಂಬಳೆಯಲ್ಲಿ ಖಮರುಲ್ ಹಸೀನಾ(ಎಸ್.ಡಿ.ಪಿ.ಐ) ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ನಾಲ್ಕು ನಗರಸಭೆಗಳ 7 ನಾಮಪತ್ರ ತಿರಸ್ಕರಿಸಿದ್ದು , 680 ಮಂದಿ ಸ್ವೀಕರಿಸಲಾಗಿದೆ. ಆರು ಬ್ಲಾಕ್ ಪಂಚಾಯತ್ಗಳಿಗೆ ಸಲ್ಲಿಸಲಾಗಿದ್ದ 483 ನಾಮಪತ್ರದಲ್ಲಿ 476 ನಾಮಪತ್ರಗಳು ಸ್ವೀಕೃತಗೊಂಡಿದೆ. 38 ಗ್ರಾಮ ಪಂಚಾಯತ್ಗಳಿಗೆ 4,082 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 48 ನಾಮಪತ್ರಗಳು ತಿರಸ್ಕೃತಗೊಂಡಿದೆ. 4,034 ಮಂದಿ ಕಣದಲ್ಲಿದ್ದಾರೆ .
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಯಿತು. ಈ ಸಂದರ್ಭ ಕೊರೊನಾ ಮಾನದಂಡದಂತೆ ಪ್ರಕ್ರಿಯೆ ನಡೆಯಿತು.
ನ.23ರ ಸೋಮವಾರದಂದು ನಾಮಪತ್ರ ಹಿಂತೆಗೆಯಲು ಕೊನೆ ದಿನವಾಗಿದ್ದು, ಅಂದು ಸಂಜೆ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.