ಮಂಗಳೂರು, ನ. 21 (DaijiworldNews/MB) : ಅಂತಿಮ ವರ್ಷದ ಪದವಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದಿದೆ. ಕಾಲೇಜು ತೆರದು ಶುಕ್ರವಾರಕ್ಕೆ ನಾಲ್ಕು ದಿನಗಳಾಗಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸುಮಾರು ಶೇ. 10 ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು.

ಲಾಕ್ಡೌನ್ ಬಳಿಕ ನವೆಂಬರ್ 17 ರಂದು ಮತ್ತೆ ಪದವಿ ಕಾಲೇಜುಗಳನ್ನು ತೆರೆಯಲಾಗಿದ್ದು ಶೇ. 5 ರಷ್ಟು ವಿದ್ಯಾರ್ಥಿಗಳು ಹಾಜರಿದ್ದರು. ಅನೇಕ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಜರಾಗಲು ಕೊರೊನಾ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವಾರದಿಂದ ಸಾವಿರಾರು ಜನರು ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದು ಆದ್ದರಿಂದ ಪರೀಕ್ಷಾ ಕೇಂದ್ರಗಳು ಒತ್ತಡದಲ್ಲಿವೆ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಇಲ್ಲಿಯವರೆಗೆ ಸುಮಾರು 15 ಸಾವಿರ ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ಯಾವುದೇ ವಿದ್ಯಾರ್ಥಿಗಳು, ಕಾಲೇಜು ಬೋಧಕೇತರ ಸಿಬ್ಬಂದಿ ಮತ್ತು ಬೋಧನಾ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿಲ್ಲ. ಉಡುಪಿ ಜಿಲ್ಲೆಯಲ್ಲಿ ಸುಮಾರು 6,000 ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಏಳು ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ರಾಮಚಂದ್ರ ಬಾಯಾರಿ ಹಾಗೂ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.