ಮಂಗಳೂರು, ಜೂ06: ನಗರದ ಸುರತ್ಕಲ್ನಲ್ಲಿ ವ್ಯಕ್ತಿಯೋರ್ವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ಚರಂಡಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ(50) ಎಂದು ಗುರುತಿಸಲಾಗಿತ್ತು. ಜೂ.02ರಂದು ನಗರದ ಹೊರವಲಯ ಸುರತ್ಕಲ್ ಕೃಷ್ಣಾಪುರ ರಸ್ತೆಯ ಚುಕ್ಕಬೆಟ್ಟು ಎಂಬಲ್ಲಿರುವ ಚರಂಡಿಯಲ್ಲಿ ಗೋಣಿಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನುಗುಂದ ನಿವಾಸಿ ಸಣ್ಣಗೌಡ್ರು (55) ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ನಿವಾಸಿ ಹುಲ್ಲಪ್ಪ ಬಸಪ್ಪ ಸೂಡಿ (28) ಬಂಧಿತ ಆರೋಪಿಗಳು.
ಆರೋಪಿ ಸಣ್ಣಗೌಡ್ರು ಮೃತ ಮರಿಯಪ್ಪ ಅವರಿಗೆ ಹಣ ನೀಡಬೇಕಾಗಿತ್ತು. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಸಿಟ್ಟುಗೊಂಡ ಸಣ್ಣಗೌಡ್ರು ಮತ್ತು ಹುಲ್ಲಪ್ಪ ಬಸಪ್ಪ, ಮರಿಯಪ್ಪ ಕೊಲೆಗೆ ಸಂಚು ರೂಪಿಸಿ ವಿಲಕ್ಷಣ ರೀತಿಯಲ್ಲಿ ಕೊಲೆ ಮಾಡಿದ್ದರು.
ಇದೀಗ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದು, ತನಿಖೆ ಸಂದರ್ಭದಲ್ಲಿ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾರೆ.