ಮಂಗಳೂರು, ನ. 21 (DaijiworldNews/MB) : ತಾನು ಕೆಲಸ ಮಾಡುವ ಖಾಸಗಿ ಬಸ್ನ ಪ್ರಯಾಣಿಕರೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದ ಬಸ್ ಕಂಡಕ್ಟರ್ (ನಿರ್ವಾಹಕ) ಒಬ್ಬರು ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಯಾಣಿಕನ ಪ್ರಾಣ ಉಳಿಸಲು ತನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಬಸ್ ಕಂಡಕ್ಟರ್ನ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಬಸ್ ನಿರ್ವಾಹಕ ಗಣೇಶ್
ನವೆಂಬರ್ 16 ರಂದು ಸುರತ್ಕಲ್ನ ಶಾನ್ ಬಸ್ನ ಬಸ್ನ ಕಂಡಕ್ಟರ್ ಗಣೇಶ್ ಅವರು ಬಜ್ಪೆ ಕೈಕಂಬ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಅವರು ಕರ್ತವ್ಯದಲ್ಲಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ವಾರಣಾಸಿಯ ರಾಜೇಶ್ ಚೌಹಾನ್ (40) ಎಂಬ ವ್ಯಕ್ತಿಯು ಬಸ್ ಕಾಟಿಪಳ್ಳ ಸಮೀಪವಾಗುತ್ತಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದರು.
ಆ ಕೂಡಲೇ ಟಿಕೆಟ್ ಸಂಗ್ರಹ ಕಾರ್ಯವನ್ನು ಬಸ್ ಚಾಲಕನಿಗೆ ಒಪ್ಪಿಸಿದ ಕಂಡಕ್ಟರ್ ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕನನ್ನು ಸುರತ್ಕಲ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗೆ ಪ್ರಯಾಣಿಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಆ ಕೂಡಲೇ ತನ್ನ ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ್ನಲ್ಲಿ ಅಸ್ವಸ್ಥ ಪ್ರಯಾಣಿಕನನ್ನು ವೆನ್ಲಾಕ್ ಆಸ್ಪತ್ರೆಗೆ ಕಂಡಕ್ಟರ್ ಗಣೇಶ್ ಕರೆತಂದಿದ್ದಾರೆ.
ಆದರೆ ರಾಜೇಶ್ ಚೌಹಾನ್ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜೇಶ್ ಮಂಗಳೂರಿನಲ್ಲಿ ದಿನಗೂಲಿ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚಾಗಿ, ಅವರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಜೇಬಿನಲ್ಲಿ ಕಂಡುಬಂದ ಗುರುತಿನ ಚೀಟಿಯ ಆಧಾರದ ಮೇಲೆ, ಅವರ ಗುರುತನ್ನು ಪತ್ತೆಹಚ್ಚಲಾಗಿದೆ. ವಾರಣಾಸಿಯಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು ಬಳಿಕ ಅವರು ಸುರತ್ಕಲ್ಗೆ ಆಗಮಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿದೆ.
ಗಣೇಶ್ ಈ ಘಟನೆಯ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗಣೇಶ್ ಅವರ ಈ ನಿಸ್ವಾರ್ಥ ಸೇವೆಗಾಗಿ ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿ ಐ ಚಂದ್ರಪ್ಪ ಮತ್ತು ಇತರ ಸಿಬ್ಬಂದಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾನವೀಯ ನೆಲೆಯಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಿದ ಗಣೇಶ್ ಅವರಿಗೆ ರಾಜೇಶ್ ಅವರಿಗೆ ಹೃದಯಾಘಾತವಾಗಿದ್ದ ವಿಚಾರ ಮೊದಲೇ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದು ತಿಳಿದಿದ್ದರೆ, ಪ್ರಥಮ ಚಿಕಿತ್ಸೆಯನ್ನು ನೀಡಬಹುದಿತ್ತು ಎಂದು ಅವರು ಹೇಳುತ್ತಾರೆ. ಚಿಕಿತ್ಸೆಯ ನಂತರವೂ ಪ್ರಯಾಣಿಕನ ಜೀವ ಉಳಿಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.