ತಿರುವನಂತಪುರಂ ಜೂ06: ಕೋಯಿಕ್ಕೋಡ್ ಜಿಲ್ಲೆಯ ಪೆರಂಬರ ತಾಲೂಕಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ 31ರ ಹರೆಯದ ಲಿನಾ ನಿಫಾ ಸೋಂಕು ತಗುಲಿ ಮೃತಪಟ್ಟಿದ್ದು, ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಸ್ಪತ್ರೆ ಹೆಸರನ್ನೇ ಬದಲಾಯಿಸಲು ಚಿಂತನೆ ನಡೆಸಲಾಗಿದೆ.
ಎಂಜೆಲ್ ಲಿನಿ ಮೆಮೋರಿಯಲ್ ಆಸ್ಪತ್ರೆ (Angel Lini Memorial government hospital) ಎಂದು ಹೆಸರು ಬದಲಾಯಿಸಿ, ಲಿನಿ ಅವರಿಗೆ ಗೌರವ ಸಲ್ಲಿಸಲು ತೀರ್ಮಾನಿಸಲಾಗಿದೆ. ಮಾತ್ರವಲ್ಲ, ಸೋಂಕು ತಗುಲಿ ಮೃತಪಟ್ಟ ಕೇರಳದ ನರ್ಸ್ ಲಿನಿ ಪುತುಸೆರ್ರಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಮರಿಸಿ, ಗೌರವಿಸಿದೆ.
ಕಳೆದ ತಿಂಗಳು ಕೇರಳದ ಪೆರಂಬ್ರಾ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದ ಲಿನಿ ಅವರಿಗೆ ಸೋಂಕು ತಗುಲಿತ್ತು. ಪರಿಣಾಮ, ಮೇ 21ರಂದು ಕೋಯಿಕೋಡ್ನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಲಿನಿ ಅವರು ಇಬ್ಬರು ಮಕ್ಕಳ ತಾಯಿಯಾಗಿದ್ದು, ತಮ್ಮ ಮಕ್ಕಳ ಪೋಷಣೆ ನೋಡಿಕೊಳ್ಳುವಂತೆ ಪತಿಗೆ ಭಾವುಕರಾಗಿ ಬರೆದಿದ್ದ ಕೊನೆಯ ಪತ್ರ ಎಲ್ಲೆಡೆ ಸುದ್ದಿ ಮಾಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಜಿಮ್ ಕ್ಯಾಂಪ್ಬೆಲ್ ಅವರು, ''ನಾವು ಲಿನಿ ಪುತುಸ್ಸೆರಿ (ಭಾರತ), ರಜಾನ್ ಅಲ್-ನಾಜ್ಜರ್ (ಗಾಜಾ), ಸಲೋಮ್ ಕರ್ವಾಹ್ (ಲಿಬೇರಿಯಾ) ಅವರನ್ನು ಎಂದಿಗೂ ಮರೆಯಬಾರದು,'' ಎಂದು ತಿಳಿಸಿದೆ.