ಮಂಗಳೂರು, ನ.21 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ 'ಅದಾನಿ ಏರ್ಪೋರ್ಟ್ಸ್' ಎಂದು ಬರೆಯಲಾಗಿದ್ದು, ಇದನ್ನು ಕೂಡಲೇ ತೆಗೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ದಿಲ್ರಾಜ್ ಆಳ್ವ ಹೇಳಿದ್ದಾರೆ.



ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಹಸ್ತಾಂತರಿಸಿದ ಕೂಡಲೇ ಹೆಸರನ್ನು ಬದಲಾಯಿಸಬೇಕೆಂದಿಲ್ಲ, ಮಾಜಿ ಸಂಸದ ಶ್ರೀನಿವಾಸ್ ಮಲ್ಯರ ಕೊಡುಗೆ, ಕರಾವಳಿ ಜಿಲ್ಲೆಯ ಜನರ ತ್ಯಾಗದ ಸಂಕೇತವಾಗಿರುವ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಗಿದೆ. ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಾಟ ಮಾಡಿಲ್ಲ, ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಖಾಸಗೀಕರಣ ನೆಪದಲ್ಲಿ ಅದಾನಿ ಸಂಸ್ಥೆಯು ತುಳುನಾಡ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಮಾನ ಮನಸ್ಕರನ್ನು ಒಂದೇ ವೇದಿಕೆಯಡಿ ತಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣ ಹಸ್ತಾಂತರ ವೇಳೆ ಮಂಗಳೂರು ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ನಿರ್ಲಕ್ಷಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ವಿರುದ್ಧ ತುಳುನಾಡಿನ ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯೇತರ ಸಂಘಟನೆಗಳು ನಮ್ಮ ಜಿಲ್ಲೆಯ ಹಿತರಕ್ಷಣೆ ಗಮನದಲ್ಲಿಸಿರಿಸಿಕೊಂಡು ಕೆಲವು ಬೇಡಿಕೆಗಳನ್ನು ಅದಾನಿ ಕಂಪೆನಿಗೆ ಸಲ್ಲಿಸುತ್ತೇವೆ.
ಇನ್ನು ವಿಮಾನ ನಿಲ್ದಾಣದಲ್ಲಿನ ಉದ್ಯೋಗದಲ್ಲಿದ್ದ ಸ್ಥಳೀಯರನ್ನು ತೆಗೆದುಹಾಕಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸಲು ಒತ್ತಾಯಿಸುತ್ತೇವೆ. ಮಂಗಳೂರು ರೈಲು ನಿಲ್ದಾಣದಲ್ಲಿ ಮಲಯಾಳಿ ಮಾತನಾಡುವ ಜನರು ಉದ್ಯೋಗದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ, ಹಿಂದಿ ಮತ್ತು ಗುಜರಾತಿ ಮಾತನಾಡುವ ಜನರನ್ನು ಎಲ್ಲಾ ಉದ್ಯೋಗಗಳಿಗೆ ನೇಮಿಸುವ ಸಾಧ್ಯತೆಯಿದೆ ಎಂದರು.
ವಿಮಾನ ನಿಲ್ದಾಣದ ಮರುನಾಮಕರಣದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ, ಕೋಟಿ ಚೆನ್ನಯಾ, ರಾಣಿ ಅಬ್ಬಕ್ಕ, ನಾರಾಯಣ ಗುರು ಮತ್ತು ಶ್ರೀನಿವಾಸ್ ಮಲ್ಯ ಅವರ ಹೆಸರುಗಳು ಸಾಲಿನಲ್ಲಿವೆ, ಆದರೆ ದುರದೃಷ್ಟಕರವೆಂದರೆ ಮರುನಾಮಕರಣದ ವಿಷಯವು ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಮರುನಾಮಕರಣದ ವಿಷಯದಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ತುಳುನಾಡು ಸಾಧಿಸಿದವರನ್ನು ಗೌರವಿಸಬೇಕಾದರೆ, ವಿಮಾನ ನಿಲ್ದಾಣವನ್ನು ತುಳುನಾಡ ವಿಮಾನ ನಿಲ್ದಾಣ ಎಂದು ಹೆಸರಿಸುವುದು ಉತ್ತಮ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಉಮಾನಾಥ್ ಕೋಟೆಕಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.