ಬೆಂಗಳೂರು, ಜೂ06: ನೂತನ ಮೈತ್ರಿ ಸರ್ಕಾರದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಸಚಿವ ಯು ಟಿ ಖಾದರ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನೂತನ ಮೈತ್ರಿ ಸರ್ಕಾರದ ಸಚಿವರಾಗಿ ಬೆಂಗಳೂರಿನಲ್ಲಿರುವ ರಾಜಭವನದಲ್ಲಿ ಯುಟಿ ಖಾದರ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಖಾದರ್ ಅವರಿಗೆ ಪ್ರಮಾಣ ವಚನ ಭೋದಿಸಿದರು. ಜನ ಮೆಚ್ಚಿದ ನಾಯಕ, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ಸಚಿವ ಯು.ಟಿ.ಖಾದರ್ ಈ ಹಿಂದೆ ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಮಾಜ ಸೇವೆಯ ಮೂಲಕ ಜನರ ಮನ ಗೆದ್ದ ಯು ಟಿ ಖಾದರ್ ಅವರಿಗೆ ಈ ಬಾರಿಯೂ ಸಚಿವರಾಗಿ ಸ್ಥಾನಮಾನ ನೀಡಲಾಗಿದೆ.
ಸಚಿವ ಯುಟಿ ಖಾದರ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ತಮ್ಮ ಮಗಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದು, ಪ್ರತಿಜ್ಞಾವಿಧಿ ಸ್ವೀಕರಿಸುವ ಸಂದರ್ಭ ಮಗಳು ಸಾಥ್ ನೀಡಿದ್ದಾಳೆ.
ಕಾಂಗ್ರೆಸ್ ಪಕ್ಷದ 15 ಶಾಸಕರು ಮತ್ತು ಜೆಡಿಎಸ್ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ ಸಮಾರಂಭದಲ್ಲಿ ಹಾಜರಿದ್ದರು. ಬಿಎಸ್ಪಿಯ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸತೀಶಚಂದ್ರ ಮಿಶ್ರಾ ಹಾಜರಿದ್ದರು.