ಮಂಗಳೂರು, ನ. 22 (DaijiworldNews/MB) : ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಮಹಿಳೆಗೆ ಉಡುಗೊರೆ ನೀಡುವ ಆಮಿಷವೊಡ್ಡಿ 14.91 ಲಕ್ಷ ರೂ. ವಂಚಿಸಿದ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ವರ್ಷ ಆಗಸ್ಟ್ 5 ರಂದು ನಗರದ ಪಾಂಡೇಶ್ವರ ನಿವಾಸಿ ಮಹಿಳೆಯೊಬ್ಬರಿಗೆ ರಿಯೊನಾರ್ಡೊ ನೀಲ್ ಎಂಬ ವ್ಯಕ್ತಿಯಿಂದ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಮಹಿಳೆ ಇದನ್ನು ಆಕ್ಸೆಪ್ಟ್ ಮಾಡಿದ್ದಾರೆ. ಬಳಿಕ ಮಹಿಳೆಯ ಫೋನ್ ನಂಬರ್ ಪಡೆದಿದ್ದು ಇಂಟರ್ನೆಟ್ ಮೂಲಕ ಆಗಾಗ್ಗೆ ಮಹಿಳೆಗೆ ಕರೆ ಮಾಡಲು ಪ್ರಾರಂಭಿಸಿದ್ದನು. ಬಳಿಕ ಮಹಿಳೆಗೆ ಉಡುಗೊರೆಯನ್ನು ಕಳುಹಿಸುವುದಾಗಿ ಹೇಳಿದ್ದು ಆಕೆ ಅದಕ್ಕೆ ನಿರಾಕರಿಸಿದ್ದಾಳೆ ಎಂದು ಹೇಳಲಾಗಿದೆ.
ಆದರೆ, ಆಗಸ್ಟ್ 25 ರಂದು ಮಹಿಳೆಯೊಬ್ಬರು ದೂರುದಾರರಿಗೆ ಕರೆ ಮಾಡಿ ಕೊರಿಯರ್ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ನಿಮ್ಮ ಹೆಸರಿನಲ್ಲಿ ಉಡುಗೊರೆ ಪಾರ್ಸೆಲ್ ಬಂದಿದೆ. ಅದನ್ನು ಪಡೆಯಲು ಅವಳು 32,800 ರೂ. ಪಾವತಿಸಬೇಕು ಎಂದು ಹೇಳಿದ್ದಾರೆ. ಬಳಿಕ ಮತ್ತೋರ್ವ ಮಹಿಳೆಯು ಕರೆ ಮಾಡಿ ನವದೆಹಲಿಯ ಕಸ್ಟಮ್ಸ್ ಅಧಿಕಾರಿಯೆಂದು ತನ್ನನ್ನು ಪರಿಚಯಿಸಿಕೊಂಡು ಕಸ್ಟಮ್ಸ್ ಶುಲ್ಕ, ಖಾತೆಯ ಮಾಹಿತಿ ಹಾಗೂ ಜಿಎಸ್ಟಿ ವೆಚ್ಚವನ್ನು ಪಾವತಿಸುವಂತೆ ಹೇಳಿದ್ದಾರೆ.
ಕರೆ ಮಾಡಿದ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿಯನ್ನು ಪಡೆದ ಬಳಿಕ ಮಹಿಳೆಯ ಖಾತೆಯಿಂದ 14,91,840 ರೂಗಳಷ್ಟು ಹಣವನ್ನು ತನ್ನನ್ನು ಕಸ್ಟಮ್ಸ್ ಅಧಿಕಾರಿ ಎಂದು ಹೇಳಿದ್ದ ಮಹಿಳೆಯು ಎಗರಿಸಿದ್ದಾರೆ.
ಈ ಸಂಬಂಧ ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.