ಮಂಗಳೂರು, ಜೂ06: ಧರ್ಮ, ಸಮಾಜ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ಎಲ್ಲರೂ ತೊಡಗಿಸುವ ಮಹೋನ್ನತ ಗುರಿ ಹೊಂದಿರುವ ಮತ್ತೊಂದು ಧರ್ಮ ಸಂಸದ್ ಮಂಗಳೂರಿನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2017ರ ನವೆಂಬರ್ ತಿಂಗಳಿನಲ್ಲಿ ಕೃಷ್ಣ ನಗರಿ ಉಡುಪಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪರ್ಯಾಯ ಸಂದರ್ಭ ಐತಿಹಾಸಿಕ ಧರ್ಮ ಸಂಸದ್ ನಡೆದಿತ್ತು. ನಡೆದಿದ್ದ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸಾವಿರಾರು ಸಂತರು, ಧಾರ್ಮಿಕ ಗುರುಗಳು ಭಾಗವಹಿಸಿದ್ದರು. ಇದೀಗ ಮಂಗಳೂರಿನಲ್ಲೂ ಧರ್ಮ ಸಂಸದ್ ನಡೆಸಲು ನಿರ್ಧರಿಸಿದ್ದು, ಸೆ.3ರಂದು ಧರ್ಮ ಸಂಸದ್ ದಿನಾಂಕ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿದೆ.
ಮಂಳೂರಿನಲ್ಲಿ ನಡೆಯಲಿರುವ ಈ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಧರ್ಮ ಸಂಸದ್ ನಡೆಯಲಿದ್ದು, ಪೇಜಾವರ ಶ್ರೀ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕದ ದಶಮಾನೋತ್ಸವ ಅಂಗವಾಗಿ ಈ ಧರ್ಮ ಸಂಸದ್ ನಿಗದಿಯಾಗಿದ್ದು, ಸನಾತನ ಧರ್ಮದ ಮೌಲ್ಯಗಳು, ಜಗತ್ ಕಲ್ಯಾಣ, ಧರ್ಮಪೋಷಣೆಗಾಗಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಬದರೀನಾಥ, ಕೇದಾರ, ಗಂಗೋತ್ರಿ, ನೈಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ಇಲಾಹಾಬಾದ್, ನಾಸಿಕ್, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ದೇಶ ವಿದೇಶದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರ ಸಹಿತ ಒಟ್ಟು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.