ಕಾಸರಗೋಡು, ನ. 22 (DaijiworldNews/SM): ಹೊಳೆಗೆ ಸ್ನಾನಕ್ಕಿಳಿದ ಉಪ್ಪಳ ನಿವಾಸಿಯೋರ್ವ ನೀರಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೊತೆಗಿದ್ದ ಯುವತಿಯೋರ್ವಳು ನೀಡಿದ ಮಾಹಿತಿಯಂತೆ ನಾಪತ್ತೆಯಾದವನಿಗಾಗಿ ಶೋಧ ನಡೆಯುತ್ತಿದೆ. ಶನಿವಾರ ಸಂಜೆ ಘಟನೆ ನಡೆದಿದೆ. ಪೆರ್ಲ ಸಮೀಪದ ಮಣಿಯಂಪಾರೆಯಲ್ಲಿ ಹೊಳೆಗಿಳಿದ ಸಂದರ್ಭದಲ್ಲಿ ೪೧ ವರ್ಷದ ವ್ಯಕ್ತಿ ನೀರಿನಲ್ಲಿ ಮುಳುಗಿದ್ದು, ಇವರ ಜೊತೆ ತೆರಳಿದ್ದ ಉಪ್ಪಳದ ಯುವತಿ ಯೋರ್ವಳು ಅಪಾಯದಿಂದ ಪಾರಾಗಿದ್ದಾಳೆ.
ಘಟನೆ ಬಳಿಕ ಯುವತಿ ಸಮೀಪದ ಮನೆಯವರಿಗೆ ಮಾಹಿತಿ ನೀಡಿದ್ದು, ಬಳಿಕ ಬದಿಯಡ್ಕ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳದವರು ಶೋಧ ನಡೆಸಿದರೂ ಪತ್ತೆ ಹಚ್ಚಲಾಗಲಿಲ್ಲ. ಯುವತಿಯಿಂದ ಬದಿಯಡ್ಕ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.