ಬಂಟ್ವಾಳ ,ನ.23 (DaijiworldNews/HR): ಕಾರು ಮತ್ತು ಬೈಕ್ ನಡುವೆ ಕಲ್ಲಡ್ಕದಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆದಿತ್ಯವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕ ಕಲ್ಲಡ್ಕ ನಿವಾಸಿ ಹಿಂದೂ ಸಂಘಟನೆಯ ಯುವ ಕಾರ್ಯಕರ್ತ ಯತಿರಾಜ್ (30) ಎಂದು ಗುರುತಿಸಲಾಗಿದೆ.
ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಒಮ್ನಿ ಕಾರೊಂದು ದ್ಬಿಚಕ್ರವಾಹನಕ್ಕೆ ಡಿಕ್ಕಿಯಾಗಿ ಅದೇ ರಭಸಕ್ಕೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಬೈಕ್ ಸವಾರ ಕಲ್ಲಡ್ಕ ನಿವಾಸಿ ಯತಿರಾಜ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಠಾಣಾ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.