ಕುಂದಾಪುರ, ಜೂ 06: ಸೈದಾಂತಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ನೈಕಂಬ್ಳಿ ನಾಗರಾಜ ಶೆಟ್ಟಿ ಎಂಬುವರ ವಿರುದ್ದ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿ ಎಡಿಟ್ ಮಾಡಲಾಗಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಘಟನೆಯಿಂದ ನೊಂದಿರುವ ನಾಗರಾಜ ಸೈಬರ್ ಕ್ರೈಂ ದೂರು ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿಯಲ್ಲಿರುವ ನಾಗರಾಜರವರು ಹವ್ಯಾಸಿ ಯಕ್ಷಗಾನ ಸಂಘಕರಾಗಿ ಗುರುತಿಸಿಕೊಂಡವರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇದೇ ಸಂದರ್ಭವನ್ನು ಗಮದಲ್ಲಿರಿಸಿಕೊಂಡು ಅವರ ತೇಜೋವಧೆಗೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.
ರಾಜ್ಯದ ಸುದ್ದಿವಾಹಿನಿಯೊಂದರಲ್ಲಿ ಪ್ರಕಟವಾದ ಸುದ್ದಿ ಎಂಬಂತೆ ಬಿಂಬಿಸಿ ನಾಗರಾಜ ಶೆಟ್ಟಿ ಹಾಗೂ ಅಪರಿಚಿತ ಮಗುವೊಂದರ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಾಜ ಶೆಟ್ಟಿ ನೈಕಂಬ್ಳಿ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಪರ ಸಕ್ರಿಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದರ ಹಿನ್ನಲೆಯಲ್ಲಿ ಈಗ ವ್ಯವಸ್ಥಿತ ಅಪಪ್ರಚಾರಕ್ಕೆ ತೊಡಾಗಿದ್ದಾರೆ. ಎಡಿಟ್ ಮಾಡಲಾಗಿರುವ ಚಿತ್ರದಲ್ಲಿ ಬಳಸಿಕೊಂಡಿರುವ ವಾಹಿನಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದೆನೆ. ಸುಳ್ಳು ಹರಡಿದವರು ಮತ್ತು ಶೇರ್ ಮಾಡಿದವರ ವಿರುದ್ದ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದಾರೆ.
ಇನ್ನು ಖಾಸಗಿ ವಾಹಿನಿಯ ಲೋಗೋ ಹಾಗೂ ಲೇಔಟ್ ನ್ನು ದುರಪಯೋಗಪಡಿಸಿಕೊಂಡ ಕಿಡಿಗೇಡಿಗಳ ವಿರುದ್ದ ವಾಹಿನಿಯ ವ್ಯವಸ್ಥಾಪಕರು ಸೈಬರ್ ಕ್ರೈಂ ಗೆ ದೂರು ಸಲ್ಲಿಸಿದ್ದಾರೆ.