ಉಡುಪಿ, ನ.23 (DaijiworldNews/PY): "ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಗಂಗಾಮತರ/ಮೊಗವೀರ ಸಮುದಾಯಕ್ಕೆ ಸೇರಿದ ಮೀನುಗಾರರ ಸಮುದಾಯದ ಪ್ರತಿನಿಧಿಯಾದ ಲಾಲಾಜಿ ಆರ್. ಮೆಂಡನ್ ಅವರಿಗೆ ಕರ್ನಾಟಕ ಸರಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇದರಿಂದ ಮೀನುಗಾರಿಕಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಾಧ್ಯ" ಎಂದು ದಕ್ಷಿಣ ಕನ್ನಡ ಮೊಗವೀರ ಹಿತಸಾಧನ ವೇದಿಕೆ, ಉಚ್ಚಿಲ ಅಧ್ಯಕ್ಷ ಪುಷ್ಪ ರಾಜ್ ಕೋಟ್ಯಾನ್ ಪಿತ್ರೋಡಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.




ಸೋಮವಾರ ಉಡುಪಿ ಪ್ರೆಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಸ್ತುತ ಕರ್ನಾಟಕದಲ್ಲಿ ಗಂಗಾಮತ/ಮೊಗವೀರ ಸಮುದಾಯಕ್ಕೆ ಸೇರಿದ 39 ವಿವಿಧ ಮೀನುಗಾರರ ಸಮುದಾಯದ ಕರ್ನಾಟಕದಲ್ಲಿ, 80 ಲಕ್ಷ ಹೆಚ್ಚಿನ ಜನಸಂಖ್ಯೆ ಇರುವ ದೊಗವೀರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ, ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ" ಎಂದರು.
"ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಮ್ಮ ಸಮುದಾಯದ ಚುನಾಯಿತ ಜನ ಪ್ರತಿನಿಧಿಗಳ ಬೇರೆ ಪಕ್ಷಗಳಿಂದ ಆಯ್ಕೆಯಾಗಿ ಆಯಾ ರಾಜ್ಯದ ಆಡಳಿತ ಪಕ್ಷಗಳ ಮೂಲಕ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿರುತ್ತದೆ. ಅಷ್ಟೆ ಅಲ್ಲದೆ. ಕರ್ನಾಟಕದಲ್ಲಿಯೂ ಕೂಡ ಈ ಹಿಂದಿನ ಎಲ್ಲಾ ಸರಕಾರಗಳು ಮೀನುಗಾರರ ಸಮುದಾಯಕ್ಕೆ ಪ್ರಾತಿನಿಧಿತ್ವ ನೀಡುತ್ತಾ ಬಂದಿದ್ದರು. ಆದರೆ, ಭಾರತೀಯ ಜನತಾ ಪಕ್ಷ ಮಾತ್ರ ನಮ್ಮ ಸಮುದಾಯಕ್ಕೆ ಪ್ರಾತಿನಿಧಿತ್ವ ನೀಡದೆ ಮೊಗವೀರ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದು ಬಹಳ ಖೇದಕರ" ಎಂದು ತಿಳಿಸಿದರು.
"ಕರ್ನಾಟಕ ವಿಧಾನ ಸಭಾ ಸದಸ್ಯರುಗಳ ಪೈಕಿ ಆಡಳಿತ ಪಕ್ಷದ ಗಂಗಾಮತ/ಮೊಗವೀರ ಸಮುದಾಯಕ್ಕೆ ಸೇರಿರುವ ವಿಧಾನಸಭಾ ಸದಸ್ಯರ ಸಂಖ್ಯೆ ಕೇವಲ 1. ನಮ್ಮ ಸಮುದಾಯದ ಬಗ್ಗೆ ಈ ರೀತಿಯ ಜಾಣ ಕುರುಡನ್ನು ನಾವು ಯಾವುದೇ ಕಾರಣ ಒಪ್ಪಲು ಸಾಧ್ಯವಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಗಳು ಭಾರತೀಯ ಜನತಾ ಪಕ್ಷದ ಭದ್ರಕೋಟೆ ಎಂಬುದರಲ್ಲಿ ಸಂಶಯ ಇಲ್ಲ.ಆದರೆ ರಾಜ್ಯದಲ್ಲಿ ನಮ್ಮ ಸಮುದಾಯದ ಮತದಾರರ ಮುಗ್ಧತನವನ ಭಾರತೀಯ ಜನತಾ ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿ ನಮಗೆ ಬೇಸರವನ್ನುಂಟು ಮಾಡಿದೆ. ನಮ್ಮ ಮೊಗವೀರ ಸಮುದಾಯಕ್ಕೆ ಸೇರಿರುವ ಕರ್ನಾಟಕ ಏಕೈಕ ಶಾಸಕರಾದ ಭಾರತೀಯ ಜನತಾ ಪಕ್ಷದಿಂದ 6 ಬಾರಿ ಸ್ಪರ್ಧಿಸಿ, 3 ಬಾರಿ ಶಾಸಕರಾಗಿರುವ ಹಿರಿಯ ಅನುಭವಿ ಕಳಂಕ ರಹಿತ ರಾಜಕಾರಿಣಿಯಾಗಿರುವ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ಶ್ರೀ ಲಾಲಾಜಿ ಆರ್. ಮೆಂಡನ್ರವರಿಗೆ ಕರ್ನಾಟಕ ಸರಕಾರದ ಸಚಿವ ಸಂಪುಟದಲ್ಲಿ ನೀಡಬೇಕೆಂದು ಸಿ ಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರದ ನಳಿನ್ ಕುಮಾರ್ ಕಟೀಲ್ರವರನ್ನು ಹಾಗೂ ಭಾರತೀಯ ಜನತಾ ಪಕ್ಷದ ಹೈಕಮಾಂಡನ್ನು ಆಗ್ರಹಿಸುತ್ತಿದ್ದೇವೆ "ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಡಾ. ದೇವಿಪ್ರಸಾದ್ ಹೆಜಮಾಡಿ, ರಾಜಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ, ದಾಮೋದರ ಸುವರ್ಣ, ಹದಿನಾರು ಪಟ್ಣ ಮೊಗವೀರ ಸಭಾ, ಉಚ್ಚಿಲ, ಮನೋಜ್ ಕಾಂಚನ್, ಉಪಾಧ್ಯಕ್ಷರು, ನಾಲ್ಕು ಪಟ್ಣ ಮೊಗವೀರ ಸಭಾ, ಸೋಮನಾಥ ಸುವರ್ಣ, ಕೊಶಾಧಿಕಾರಿ, ದ.ಕ. ಮೊಗವೀರ ಹಿತಸಾಧನಾ ವೇದಿಕೆ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.