ಮಂಗಳೂರು, ನ.23 (DaijiworldNews/PY): ಫೆವಿಕಲ್ ಸಂಸ್ಥೆಯ ಜಾಹೀರಾತಿನಿಂದ ಕರಾವಳಿ ಕರ್ನಾಟಕದ ಕಲೆಯಾದ ಯಕ್ಷಗಾನಕ್ಕೆ ಅವಮಾನವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿವೆ.

ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, "ಫೆವಿಕಲ್ ಜಾಹೀರಾತಿನಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ಇತರೆ ಹಿನ್ನೆಲೆ ಸಂಗೀತಗಾರರನ್ನು ಸೂಕ್ತವಾಗಿ ತೋರಿಸಲಾಗಿಲ್ಲ. ಯಕ್ಷಗಾನ ಕಲೆಗೆ ಈ ರೀತಿಯಾದ ಅವಮಾನ ಸರಿಯಲ್ಲ" ಎಂದಿದ್ದಾರೆ.
ಈ ಜಾಹೀರಾತನ್ನು ಮುಂಬೈ ಮೂಲದ ಕಂಪನಿಯೊಂದು ಮಾಡಿದ್ದು, ಈ ಜಾಹೀರಾತಿನಲ್ಲಿ ಯಕ್ಷಗಾನ ಕಲಾವಿದರನ್ನು ತೋರಿಸಲಾಗಿದೆ. ಈ ಜಾಹೀರಾತನ್ನು ಮಾಡಿದ ಕಂಪೆನಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಇನ್ನು, ಈ ಜಾಹೀರಾತಿನಲ್ಲಿ ಯಕ್ಷಗಾನಕ್ಕೆ ಯಾವುದೇ ರೀತಿಯಾದ ಅವಮಾನವಾಗಿಲ್ಲ ಎಂದು ಕೆಲವು ಮಂದಿ ವಾದಿಸುತ್ತಿದ್ದಾರೆ.
ಜಾಹೀರಾತಿನಲ್ಲಿ, ರಾಜನ ಪಾತ್ರ ಧರಿಸಿದ ಕಲಾವಿದ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಸಂದರ್ಭ ಸಿಂಹಾಸನ ಮುರಿದು ಬೀಳುತ್ತದೆ. ಈ ದೃಶ್ಯವನ್ನು ನೋಡಿದ ಮತ್ತೋರ್ವ ಕಲಾವಿದ ಇದನ್ನು ನೋಡಿ ನಗುತ್ತಾನೆ. ನಂತರ ರಾಜನ ಪಾತ್ರ ಧರಿಸಿದಾತ ಆತನನ್ನು ತಳ್ಳುತ್ತಾನೆ. ಬಳಿಕ ಆತನೂ ಬೀಳುತ್ತಾನೆ. ಈ ವೇಳೆ ಆತನ ಸಿಂಹಾಸನವೂ ಕೂಡಾ ಮುರಿಯುತ್ತದೆ. ಈ ಸಂದರ್ಭ ಇಬ್ಬರೂ ಕೂಡಾ ಜಗಳವಾಡಲು ಪ್ರಾರಂಭಿಸುದಾಗ ಇಡೀ ವೇದಿಕೆಯೇ ಕುಸಿದು ಬೀಳುತ್ತದೆ. ಕೊನೆಗೆ, ಫೆವಿಕಲ್ ಅನ್ನು ಬಳಸಿದ್ದರೆ ಕುಸಿತವು ಸಂಭವಿಸುವುದಿಲ್ಲ ಎಂದು ಹೇಳುವುದರ ಮೂಲಕ ಜಾಹೀರಾತು ಕೊನೆಗೊಳ್ಳುತ್ತದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗ್ಡೆ ಅವರು ಜಾಹೀರಾತನ್ನು ಸಮರ್ಥಿಸಿಕೊಂಡಿದ್ದು, "ಫೆವಿಕಲ್ ಕಂಪನಿಯು ತಮ್ಮ ಜಾಹೀರಾತಿಗಾಗಿ ಯಕ್ಷಗಾನದ ಜನಪ್ರಿಯ ಕಲಾ ಪ್ರಕಾರವನ್ನು ಬಳಸಿದೆ. ನಾನು ಅದನ್ನು ನೋಡಿದ್ದೇನೆ. ಅದರಲ್ಲಿ ಏನು ತಪ್ಪಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ, ಆ ಜಾಹೀರಾತಿನಲ್ಲಿ ಯಕ್ಷಗಾನದ ಸ್ಥಾನಮಾನ ಉನ್ನತ ಮಟ್ಟಕ್ಕೆ ಹೋಯಿತು ಹಾಗೂ ಕಲೆಗೆ ಯಾವುದೇ ಅವಮಾನವಾಗಿಲ್ಲ. ಯಕ್ಷಗಾನ ದೇಶದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ದೈಜಿವರ್ಲ್ಡ್ನೊಂದಿಗೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರು, "ಈ ಜಾಹೀರಾತಿನಿಂದ ಎಲ್ಲೋ ಒಂದು ಕಡೆ ಭಾವನೆಗೆ ಧಕ್ಕೆ ಆಗಿದೆ ಎಂದು ಹಲವಾರು ಜನರು ನನ್ನ ಗಮನಕ್ಕೆ ತಂದಿದ್ದಾರೆ. ನಮ್ಮ ದ.ಕ ಜಿಲ್ಲೆಯ ಕರಾವಳಿಯ ಬಹುದೊಡ್ಡ ಕಲೆಯಾದ ಯಕ್ಷಗಾನದ ಬಗ್ಗೆ ಜನರು ಭಾವನೆಗಳನ್ನು ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಹಲವಾರು ಜನ ನನಗೆ ಮಾಹಿತಿ ಕೊಟ್ಟಾಗ ಇದಕ್ಕೆ ನಾನು, ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದೇನೆ. ಫೆವಿಕಲ್ ಕಂಪೆನಿಯವರು ಯಾವುದೇ ಒಂದೊ ರೀತಿಯಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡುವ ಉದ್ದೇಶ ಅವರಿಗೆ ಇರದಿದ್ದರೂ, ಎಲ್ಲೋ ಒಂದು ಕಡೆ ನಮ್ಮ ಭಾವನೆಗೆ ಧಕ್ಕೆಯಾಗಿದೆ ಎಂದು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ಶಾಸಕನಾಗಿ ನಮ್ಮ ಜನರ ಭಾವನೆಗೆ ನಾನು ಸ್ಪಂದಿಸಬೇಕಾದ ಜವಾಬ್ದಾರಿ ನನ್ನದು. ಅದನ್ನು ನಾನು ಮಾಡುತ್ತಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಜಾಹೀರಾತನ್ನು ತೆಗೆದುಹಾಕಲು ತಿಳಿಸುತ್ತೇನೆ" ಎಂದು ತಿಳಿಸಿದ್ದಾರೆ.