ಕಾರ್ಕಳ,ನ.23 (DaijiworldNews/HR): ಹಲವು ಗಣ್ಯರ ಜಯಂತಿಗಳನ್ನು ಆಚರಿಸುತ್ತಾ ಬಂದಿರುವುದರಲ್ಲಿ ವಿಶ್ವದಲ್ಲಿಯೇ ಭಾರತವು ಅಗ್ರಪಂಕ್ತಿಗೆ ಸೇರಿದೆ. ಆದರ್ಶ ವ್ಯಕ್ತಿಗಳ ತತ್ವ-ಸಿದ್ಧಾಂತಗಳು ಸರ್ವಕಾಲಿಕವಾಗಿದ್ದು, ನಾಗರಿಕರು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸುವ ಸದ್ದುದ್ದೇಶಗಳಿಂದಾಗಿ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆ ಕಾವೇರಿ ಹೇಳಿದರು.


ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ) ಕರ್ನಾಟಕ-ಕೇರಳ ಮತ್ತು ಜಿಲ್ಲಾ ಮಲೆಕುಡಿಯ ಸಂಘ(ರಿ) ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬಿರ್ಸಾ ಮುಂಡ ಜಯಂತಿ ಮತ್ತು ಒಳ ಮೀಸಲಾತಿ ಕುರಿತು ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ನೈಸರ್ಗಿಕ ಕಾನೂನು ಪ್ರಕ್ರಿಯೆಗೆ ಒತ್ತು ನೀಡಿದ ಬಿರ್ಸಾ ಮುಂಡ ಅವರು ನಿಸರ್ಗವೇ ದೇವರು. ನಿಸರ್ಗದ ಮುಂದೆ ಎಲ್ಲರೂ ಸರಿಸಮಾನರು ಎಂಬುವುದನ್ನು ಪ್ರತಿಪಾದಿಸಿ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. ನಿಸರ್ಗವನ್ನು ನೆಚ್ಚಿಕೊಂಡು, ನಿಸರ್ಗವೇ ನಮ್ಮ ಜೀವನ ಶೈಲಿ ಎಂಬುದನ್ನು ಅರಿತುಕೊಂಡು ಬದುಕಿದಾಗ ಗಂಡಾಂತರ ಸಮಸ್ಯೆಗಳು ಎದುರುಗೊಳ್ಳುತ್ತಿರಲಿಲ್ಲ. ಆದರೆ ಮಾನವನು ಅದನೆಲ್ಲ ಉಲ್ಲಂಘಿಸಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿದ ಪರಿಣಾಮವಾಗಿ ಹಲವು ಸಂಕಷ್ಟಗಳನ್ನು ಎದುರಿಸುವ ಕಾಲಘಟ್ಟಕ್ಕೆ ತಲುಪಿಸಿದ್ದಾನೆ ಎಂದು ಹೇಳಿದ್ದಾರೆ.
ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಈಶಾನ್ಯ ಭಾಗದಲ್ಲಿ ಬಿರ್ಸಾ ಮುಂಡ ಅವರು ಪ್ರಬಲ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಮೂಲನಿವಾಸಿಯಾಗಿದ್ದ ಅವರು ಮತಾಂತರ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ್ದಾರೆ. ಅವರ ಹೋರಾಟದ ಶೈಲಿಗೆ ಬ್ರಿಟಿಷರೇ ತತ್ತರಿಸಿಹೋಗಿದ್ದರು. ಬಿರ್ಸಾ ಮುಂಡ ಅವರ ಜಯಂತಿಯೂ ರಾಷ್ಟ್ರೀಯ ಜಯಂತಿಗಳಲ್ಲಿ ಒಂದಾಗಿ ಆಚರಿಸುವಂತಾಗಲಿ ಎಂದರು.
ಜಿಲ್ಲಾ ಮಲೆ ಕುಡಿಯ ಸಂಘದ ಅಧ್ಯಕ್ಷ ಮಂಜಪ್ಪ ಗೌಡ ಅಧ್ಯಕ್ಷತೆವಹಿಸಿದರು.ಉಪತಹಶೀಲ್ದಾರ್ ಮಂಜುನಾಥ, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅಮ್ಮಣ್ಣಿ, ಪ್ರಧಾನ ಕಾರ್ಯದರ್ಶಿ ಕೆ.ಪುತ್ರನ್, ಜಿಲ್ಲಾ ಮಲೆ ಕುಡಿಯ ಸಂಘದ ಅಧ್ಯಕ್ಷ ಮಂಜಪ್ಪ ಗೌಡ, ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ,ಉಪತಹಶೀಲ್ದಾರ್ ಮಂಜುನಾಥ, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅಮ್ಮಣ್ಣಿ, ಪ್ರಧಾನ ಕಾರ್ಯದರ್ಶಿ ಕೆ.ಪುತ್ರನ್ ಉಪಸ್ಥಿತರಿದ್ದರು.